ಹೈದರಾಬಾದ್: ತೆಲಂಗಾಣದ ನಾಗರ ಕರ್ನೂಲ್ ನ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗ ಕುಸಿದಿದ್ದು, ಅದರ ಮತ್ತೊಂದು ಭಾಗದಲ್ಲಿ ಸಿಕ್ಕಿಬಿದ್ದಿರುವ ಎಂಟು ಜನರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಏನಪ್ಪ ಅಂದರೆ ಸುರಂಗದ ಕೊನೆಯ 40 ಮೀಟರ್ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದಂತೆ ಕಾಣುತ್ತಿದೆ.
ಎಸ್‌ಎಲ್‌ಬಿಸಿ ಸುರಂಗ ಕುಸಿದು ಬಿದ್ದ ಪ್ರದೇಶ ಭೀಕರ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಟನಲ್ ಬೋರಿಂಗ್ ಮಿಷನ್‌ನಲ್ಲಿ (ಟಿಬಿಎಂ) ಪರಿಸ್ಥಿತಿಯನ್ನು ನಿರ್ಣಯಿಸಲು ಸೇನೆ ಮತ್ತು ಎನ್‌ಡಿಆರ್‌ಎಫ್‌ನ 34 ಸದಸ್ಯರ ವಿಶೇಷ ತಂಡ ಮಂಗಳವಾರ ಸುರಂಗದೊಳಗೆ ಪ್ರವೇಶ ಮಾಡಿವೆ. ತಕ್ಷಣದ ರಕ್ಷಣಾ ಕಾರ್ಯಾಚರಣೆಗೆ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ ಎಂದು ಹೇಳಲಾಗುತ್ತಿದೆ.
ಕೆಸರು ತಂದ ಅಡ್ಡಿ: ಮೇಲ್ಛಾವಣಿ ಕುಸಿದ ಪ್ರದೇಶದಲ್ಲಿ ಶೇ.70ರಷ್ಟು ಕೆಸರು ಹಾಗೂ ಶೇ.30ರಷ್ಟು ನೀರು ಇರುವುದರಿಂದ ನಡೆದಾಡುವುದೇ ಕಷ್ಟವಾಗುತ್ತಿದೆ. ಅದರಲ್ಲೂ 13.85 ಕಿ.ಮೀ ಉದ್ದದ ಸುರಂಗದ ಕೊನೆಯ 40 ಮೀಟರ್ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಇಲ್ಲಿ ಅಪಾರ ಪ್ರಮಾಣ ಕೆಸರು ಇರುವುದರಿಂದ ಅದರಲ್ಲಿ ಕೈಕಾಲು ಕೂಡ ಚಲಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಎನ್‌ಜಿಆರ್‌ಐ ಮತ್ತು ಜಿಎಸ್‌ಐ ಸಹಯೋಗದೊಂದಿಗೆ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡವು ಈ ಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದೆ.
ಇಲ್ಲಿ ಯಾವ ಪರಿಕರಗಳು ವರ್ಕ್ ಆಗುತ್ತಿಲ್ಲ: ಸುರಂಗದ ಕೊನೆಯಲ್ಲಿ ಛಾವಣಿಯಿಂದ ನಿರಂತರವಾಗಿ ಮಣ್ಣು ಬೀಳುತ್ತಿದೆ, 15 ಅಡಿ ಮಟ್ಟದಲ್ಲಿ ಕೆಳಭಾಗದಲ್ಲಿ ಕೆಸರು ಇದೆ, ಕತ್ತಲೆ ಮತ್ತು ಗಾಳಿಯ ಕೊರತೆಯಿಂದ ಯಾವುದೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಅಸಾಧ್ಯವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ವಿವಿಧ ಸಂಸ್ಥೆಗಳು ನೀಡುವ ಅತ್ಯಾಧುನಿಕ ಕ್ಯಾಮೆರಾಗಳು ಮತ್ತು ಉಪಕರಣಗಳು ಸಹ ಇಲ್ಲಿ ವಿಫಲಗೊಳ್ಳುತ್ತಿವೆ. ಡ್ರೋನ್‌ಗಳು ಕೂಡ ಪ್ರದೇಶವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೆಚ್ಚುವರಿಯಾಗಿ ಸುರಂಗದ 12 ನೇ ಕಿಮೀ ದಾಟಿದ ನಂತರ, ರಕ್ಷಣಾ ತಂಡಗಳು ಕೆಸರು ಮತ್ತು ನೀರಿನಲ್ಲಿ ನಡೆಯಬೇಕಾಗಿರುವುದರಿಂದ ತೊಂದರೆ ಎದುರಿಸುತ್ತಿದ್ದಾರೆ. ಕಷ್ಟಪಟ್ಟು ನಡೆದರೂ ಆಮ್ಲಜನಕದ ಕೊರತೆಯಿಂದ ಹೆಚ್ಚು ಹೊತ್ತು ಅಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಸುರಂಗದಲ್ಲಿ 3 ಕಿ.ಮೀ ವರೆಗೆ ಬಿಎಸ್‌ಎನ್‌ಎಲ್ ಸಿಗ್ನಲ್‌ಗಳು ಬರುತ್ತಿವೆ. ಇಂಟ್ರಾಕಾಮ್ ಸ್ವಲ್ಪ ದೂರದವರೆಗೆ ಮತ್ತು ನಿರ್ಮಾಣ ಕಂಪನಿಗೆ ಸೇರಿದ ವೈಫೈ ಸ್ವಲ್ಪ ದೂರದವರೆಗೆ ಕಾರ್ಯನಿರ್ವಹಿಸುತ್ತಿದೆ.
13.85 ಕಿ.ಮೀ. ಸುರಂಗವನ್ನು ಎ, ಬಿ, ಸಿ ಮತ್ತು ಡಿ ಎಂದು ವಿಂಗಡಣೆ:
- A. ಪ್ರವೇಶದ್ವಾರದಿಂದ ಸುರಂಗದವರೆಗೆ 12 ಕಿ.ಮೀ. ಎ-ಸೆಕ್ಷನ್ ಎಂದು ಗುರುತಿಸಲಾಗಿದೆ. ಲೊಕೊ ರೈಲು ಇಲ್ಲಿ ಸಂಚರಿಸಲು ಷರತ್ತುಗಳಿವೆ. ಪ್ರವೇಶ ದ್ವಾರದಿಂದ 10.7 ಕಿ.ಮೀ ವರೆಗೆ ನೀರಿಲ್ಲ. ಅಲ್ಲಿಂದ 11.30 ಕಿ.ಮೀ.ವರೆಗೆ 1.5 ಅಡಿ ನೀರಿದೆ.
- B. ಬಿ-ವಿಭಾಗವು 1.50 ಕಿ.ಮೀ. ಉದ್ದವಾಗಿದೆ. ಈ ಪ್ರದೇಶದಲ್ಲಿ ಲೊಕೊ ಟ್ರ್ಯಾಕ್‌ಗಳಲ್ಲಿ 2.5 ಅಡಿಗಳಷ್ಟು ನೀರು ಇದೆ. ಇದರಿಂದಾಗಿ ಭಾರೀ ಗಾತ್ರದ ಉಪಕರಣಗಳನ್ನು ಸಾಗಿಸಲು ಸಾಧ್ಯವಾಗಿಲ್ಲ.
- C. ಸಿ-ವಿಭಾಗವು 310 ಮೀಟರ್ ಉದ್ದವಾಗಿದೆ. ಇದು ಮಣ್ಣು, ನಿರ್ಮಾಣ ತ್ಯಾಜ್ಯ ಮತ್ತು ಉಪಕರಣಗಳನ್ನು ಒಳಗೊಂಡಿದೆ. ಇಲ್ಲಿ 100 ಮೀಟರ್ ಉದ್ದದ ಸುರಂಗ ಕೊರೆಯುವ ಯಂತ್ರ ಕುಸಿದಿದೆ. ರಕ್ಷಣಾ ತಂಡದ ಸದಸ್ಯರು ಈ ಪ್ರದೇಶದ ಅಂತ್ಯವನ್ನು ತಲುಪಲು ಸಾಧ್ಯವಾಗಿದೆ.
- D. ಡಿ- ವಿಭಾಗವು ಸುರಂಗದ ಕೊನೆಯಲ್ಲಿ TBM ಗಿಂತ 40 ಮೀಟರ್‌ಗಳಷ್ಟು ಪ್ರದೇಶವಾಗಿದೆ. ಕಟ್ಟರ್ ಈ ತುದಿಯಲ್ಲಿದೆ. ನುರಿತ ಗಣಿಗಾರರು ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಮಂಗಳವಾರ ರಾತ್ರಿ ಈ ಟಿಬಿಎಂ ಹಿಂದೆ ತಲುಪಿದ್ದಾರೆ. ಆಕ್ಸಿಜನ್ ಸಿಲಿಂಡರ್ ನೀಡಿದರೆ ಸುರಂಗದ ಕೊನೆಯ ಅಂಚನ್ನು ತಲುಪುತ್ತೇವೆ ಎಂದು ನಲ್ಗೊಂಡ ಸಿಇ ಅಜಯ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿ: ಉಜೈನಿಯಲ್ಲಿ ಮಧ್ಯರಾತ್ರಿ 2:30ಕ್ಕೆ ಶಿವನಾಮ ಸ್ಮರಣೆ: ಮಹಾಕಾಲನಿಗೆ ಚಿತಾಭಸ್ಮ ಆರತಿ: ಏನಿದರ ಮಹತ್ವ ತಿಳಿಯಿರಿ!