ನವದೆಹಲಿ:ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. "ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಹೊಂದಿರುವ ಧೋರಣೆಯನ್ನು ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಿಸಿರುವ ಪ್ರಧಾನಿ, "ಕಾಂಗ್ರೆಸ್ನ ಸತ್ಯ ಸಂಗತಿಗಳನ್ನು ಗೃಹ ಸಚಿವರು ಸದನದ ಮೂಲಕ ದೇಶಕ್ಕೆ ತಿಳಿಸಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡಿರುವ ಆ ಪಕ್ಷವು ಅಮಿತ್ ಶಾ ವಿರುದ್ಧ ಸುಳ್ಳು ಮಾಹಿತಿಯನ್ನು ಹರಡುತ್ತಿದೆ" ಎಂದು ಟೀಕಿಸಿದ್ದಾರೆ.
"ಕಾಂಗ್ರೆಸ್ ಮತ್ತು ಅದರ ಕೊಳಕು ವ್ಯವಸ್ಥೆಯು ದುರುದ್ದೇಶಪೂರಿತ ಸುಳ್ಳುಗಳು, ಇತಿಹಾಸದ ದುಷ್ಕೃತ್ಯಗಳನ್ನು ಮರೆಮಾಡಲು ಯತ್ನಿಸುತ್ತಿದೆ. ಡಾ. ಅಂಬೇಡ್ಕರ್ ಅವರಿಗೆ ಆ ಪಕ್ಷವು ಮಾಡಿದ ಅವಮಾನ, ಎಸ್ಸಿ/ಎಸ್ಟಿ ಸಮುದಾಯವನ್ನು ತುಳಿಯುವ ಕುತಂತ್ರದಲ್ಲಿ ತೊಡಗಿದೆ" ಎಂದು ಆರೋಪಿಸಿದರು.
ಕಾಂಗ್ರೆಸ್ನ ಪಾಪಗಳಿವು:ದೇಶಕ್ಕೆ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎಂಬ ಬಗ್ಗೆ ವಿವರಣೆ ನೀಡಿರುವ ಪ್ರಧಾನಿ ಮೋದಿ, "ಸಂವಿಧಾನ ಶಿಲ್ಪಿ ವಿರುದ್ಧ ಜವಾಹರ್ಲಾಲ್ ನೆಹರೂ ಅವರು ಪ್ರಚಾರ ಮಾಡಿದರು. ಎರಡು ಬಾರಿ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು. ಸೋಲಿಸುವುದು ನೆಹರೂ ಅವರ ಪ್ರತಿಷ್ಠೆಯಾಗಿತ್ತು. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ದೇಶದ ಹೆಮ್ಮೆಯ ಪುತ್ರನ ಫೋಟೋವನ್ನು ಇಡಲು ಸಹ ಅವಕಾಶ ನೀಡಿರಲಿಲ್ಲ. ಇವೆಲ್ಲವೂ ಕಾಂಗ್ರೆಸ್ ಮಾಡಿದ ಪಾಪಗಳು" ಎಂದು ಕಟುವಾಗಿ ಜರಿದಿದ್ದಾರೆ.