ಚಾರ್ಲ,ತೆಲಂಗಾಣ : ಇಬ್ಬರು ಗರ್ಭಿಣಿಯರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಆದರೆ, ಸರಿಯಾದ ಸಮಯಕ್ಕೆ ಇವರನ್ನು ಆಸ್ಪತ್ರೆಗೆ ಸೇರಿಸಲು ಈ ಊರಿಗೆ ರಸ್ತೆಯೇ ಇಲ್ಲ. ಹೀಗಾಗಿ ಇಲ್ಲಿನ ಜನ ಅವರನ್ನು 6 ಕಿಮೀ ದೂರ ಹೊತ್ತು, ನಡೆದುಕೊಂಡೇ ಬಂದು ಮುಖ್ಯ ರಸ್ತೆಗೆ ತಲುಪಿ ಅಲ್ಲಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ಇಂತಹದ್ದೊಂದು ಘಟನೆ ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತ್ತಗುಡೆಂನಲ್ಲಿ ಸೋಮವಾರ ನಡೆದಿದೆ.
ದೂರದ ಚಾರ್ಲ ಮಂಡಲದ ಭಟ್ಟಿಗುಡೆಂ ಗ್ರಾಮದ ರವ್ವ ಸುಬ್ಬಮ್ಮ ಮತ್ತು ರವ್ವ ದೇವಿ ಅವರಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸರಿಯಾದ ರಸ್ತೆ ಇಲ್ಲದ ಕಾರಣ ಗಿರಿಜನರು ತಿಪ್ಪಾಪುರಕ್ಕೆ ಸುಮಾರು 6 ಕಿಲೋಮೀಟರ್ ವರೆಗೆ ಜೆಟ್ಟಿಯಲ್ಲಿ ಇಬ್ಬರನ್ನು ಸಾಗಿಸಿದ್ದಾರೆ. ಅಲ್ಲಿಂದ ಆಟೋದಲ್ಲಿ ಸತ್ಯನಾರಾಯಣಪುರಂ ಪಿಎಚ್‌ಸಿಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲಿನ ವೈದ್ಯಾಧಿಕಾರಿ ದಿವ್ಯನಯನ ಅವರು ಸುಬ್ಬಮ್ಮ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಉತ್ತಮ ಚಿಕಿತ್ಸೆಗಾಗಿ ಭದ್ರಾಚಲಂ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರು ಮಹಿಳೆಯರ ಸ್ಥಿತಿ ಸ್ಥಿರವಾಗಿದೆ.
ಭಟ್ಟಿಗುಡೆಂ ಮತ್ತು ತಿಪ್ಪಾಪುರಂ ನಡುವಿನ ಅಂತರವು ಸರಿಸುಮಾರು 6 ಕಿಲೋಮೀಟರ್‌ಗಳು. 1 ಕಿಲೋಮೀಟರ್ ರಸ್ತೆ ನಿರ್ಮಾಣವಾಗಿದ್ದರೂ ಉಳಿದ 4 ಕಿಲೋಮೀಟರ್ ಮಾರ್ಗ ಎರಡು ವರ್ಷಗಳಿಂದ ಅಪೂರ್ಣವಾಗಿಯೇ ಉಳಿದಿದ್ದು, ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ ಇಲ್ಲದಂತಾಗಿದೆ. ಇದರಿಂದಾಗಿ ಬುಡಕಟ್ಟು ಜನಾಂಗದವರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸೋಮವಾರವೂ ಗರ್ಭಿಣಿಯರನ್ನು ಕೆಸರುಮಯವಾದ ಪ್ರದೇಶದಲ್ಲೇ ಹೊತ್ತು ತಿಪ್ಪಾಪುರಕ್ಕೆ ಕರೆತರಲಾಯಿತು. ಆ ಬಳಿಕ ಅಲ್ಲಿಂದ ಆಟೋ ಮಾಡಿ ಸತ್ಯನಾರಾಯಣಪುರಂ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯಾಧಿಕಾರಿ ಹೇಳಿದ್ದೇನು?: ವೈದ್ಯಾಧಿಕಾರಿ ದಿವ್ಯನಯನ ಮಾತನಾಡಿ, ಗರ್ಭಿಣಿಯರಿಗೆ ಬೇಗನೇ ಆಸ್ಪತ್ರೆಗೆ ಬಂದು ಸೇರುವಂತೆ ಈ ಮೊದಲೇ ಸೂಚನೆ ನೀಡಲಾಗಿತ್ತು. ಹೆರಿಗೆ ಕೊಠಡಿಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆಯನ್ನು ನೀಡಿದ್ದೆವು. ಆದರೆ ಅವರ ಕುಟುಂಬದವರು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಭುವನೇಶ್ವರದ ಕೊಳೆಗೇರಿ ನಿವಾಸಿಗಳ ಜೊತೆ ಮೋದಿ ಮಾತು: 'ಸುಭದ್ರ' ಸೇರಿ ಹಲವು ಯೋಜನೆಗಳಿಗೆ ಚಾಲನೆ - PM Modi In Odisha