ಪಾಟ್ನಾ (ಬಿಹಾರ):ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರು ಸ್ವತಃ ರಾಜಕೀಯ ಪಕ್ಷ ಘೋಷಿಸಿದರು. ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು 'ಜನ ಸ್ವರಾಜ್' ಪಕ್ಷವನ್ನು ಅಧಿಕೃತವಾಗಿ ಪ್ರಕಟಿಸಿದರು.
ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್, ಮಾಜಿ ಅಧಿಕಾರಿ ಪವನ್ ವರ್ಮಾ, ಮಾಜಿ ಸಂಸದ ಮೊನಝಿರ್ ಹಸನ್, ಮಾಜಿ ಐಎಫ್‌ಎಸ್ ಅಧಿಕಾರಿ ಮನೋಜ್ ಭಾರ್ತಿ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಇದೇ ವೇಳೆ ನೇಮಕ ಮಾಡಲಾಗಿದೆ.
ಭಾರತೀಯ ಶಿಕ್ಷಣ ವಿಶ್ವದರ್ಜೆಗೆ ಬದಲಾಯಿಸುವೆ:ಪಕ್ಷದ ಅಧಿಕೃತ ಪ್ರಕಟಣೆ ಬಳಿಕ ಮಾತನಾಡಿದ ಪ್ರಶಾಂತ್ ಕಿಶೋರ್, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ವಿವರಿಸಿ ಮತಗಳನ್ನು ಯಾಚಿಸುತ್ತೇವೆ. ಜನ ಸ್ವರಾಜ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಮದ್ಯ ನಿಷೇಧ ತೆರವು ಮಾಡಲಾಗುವುದು. ರಾಜ್ಯವನ್ನು ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆಯನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕಾಗಿ ಮುಂದಿನ ಹತ್ತು ವರ್ಷಗಳಲ್ಲಿ 5 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ. ಮದ್ಯಪಾನ ನಿಷೇಧ ತೆರವು ಮಾಡಿ, ಅದರಿಂದ ಬಂದ ಹಣವನ್ನು ಭದ್ರತೆ, ರಸ್ತೆ, ನೀರು, ವಿದ್ಯುತ್ಗಾಗಿ ಬಳಕೆ ಮಾಡಲಾಗುವುದು. ಜೊತೆಗೆ ಶಿಕ್ಷಣ ವ್ಯವಸ್ಥೆಯ ಬದಲಾವಣೆಗೂ ಖರ್ಚು ಮಾಡುವುದಾಗಿ ತಿಳಿಸಿದರು.