ಜಮ್ಮು ಮತ್ತು ಶ್ರೀನಗರ: ಇಲ್ಲಿನ ಗಂಡೇರ್ಬಾಲ್ ಜಿಲ್ಲೆಯಲ್ಲಿ ನಿರ್ಮಿಸಲಾದ ಝಡ್-ಮೋರ್ಹ್ ಸುರಂಗ ಮಾರ್ಗವನ್ನು ಜನವರಿ 13ರಂದು(ನಾಳೆ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಒಮರ್ ಅಬ್ದುಲ್ಲಾ ಅವರ ಎಕ್ಸ್ ಪೋಸ್ಟ್‌ಗಳಿಗೆ ಶನಿವಾರ ಪ್ರತಿಕ್ರಿಯಿಸಿರುವ ಮೋದಿ, ಸುರಂಗ ಮಾರ್ಗ ಉದ್ಘಾಟನೆಯಿಂದಾಗುವ ಪ್ರಯೋಜನಗಳಿಗೆ ಸಂತಸ ವ್ಯಕ್ತಪಡಿಸಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹಂಚಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ಬಹಳ ಇಷ್ಟವಾಯಿತು ಎಂದು ತಿಳಿಸಿದ್ದಾರೆ.
I am eagerly awaiting my visit to Sonmarg, Jammu and Kashmir for the tunnel inauguration. You rightly point out the benefits for tourism and the local economy.
— Narendra Modi (@narendramodi) January 11, 2025
Also, loved the aerial pictures and videos! https://t.co/JCBT8Ei175
"ಸುರಂಗ ಮಾರ್ಗದ ಉದ್ಘಾಟನೆಗಾಗಿ ಜಮ್ಮು ಕಾಶ್ಮೀರದ ಸೋನ್ಮಾರ್ಗ್ಗೆ ಭೇಟಿ ನೀಡಲು ಕಾತುರದಿಂದ ಕಾಯುತ್ತಿದ್ದೇನೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗಾಗುವ ಪ್ರಯೋಜನಗಳನ್ನು ನೀವು ಸರಿಯಾಗಿಯೇ ತೋರಿಸಿದ್ದೀರಿ. ಅಲ್ಲದೇ ವೈಮಾನಿಕ ಚಿತ್ರಗಳು ಮತ್ತು ವಿಡಿಯೋಗಳು ಇಷ್ಟವಾದವು" ಎಂದು ಪ್ರಧಾನಿ ಎಕ್ಸ್ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಅಬ್ದುಲ್ಲಾ ಸುರಂಗ ಮಾರ್ಗ ಉದ್ಘಾಟನೆಯ ಸಿದ್ಧತೆಗಳನ್ನು ಪರಿಶೀಲಿಸಲು ಸೋನ್ಮಾರ್ಗ್ಗೆ ಭೇಟಿ ನೀಡಿದ್ದರು. ನಂತರ ವಿಮಾನದಿಂದ ತೆಗೆದ ಫೋಟೋಗಳೂ ಸೇರಿದಂತೆ ಯೋಜನಾ ಸ್ಥಳದ ಹಲವು ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು.
"ಸೋಮವಾರ ಪ್ರಧಾನಿ ಮೋದಿ ಉದ್ಘಾಟನೆಗೆ ಆಗಮಿಸುತ್ತಿದ್ದು, ಸಿದ್ಧತೆಗಳನ್ನು ಪರಿಶೀಲಿಸಲು ಇಂದು ಸೋನ್ಮಾರ್ಗ್ಗೆ ಭೇಟಿ ನೀಡಿದ್ದೇನೆ. ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟನೆಯಿಂದ ವರ್ಷಪೂರ್ತಿ ಸೋನ್ಮಾರ್ಗ್ ಪ್ರವಾಸೋದ್ಯಮಕ್ಕೆ ಮುಕ್ತವಾಗಲಿದೆ. ಸೋನ್ಮಾರ್ಗ್ ಈಗ ಸ್ಕೀ ರೆಸಾರ್ಟ್ ಆಗಿ ಅಭಿವೃದ್ಧಿ ಹೊಂದಲಿದೆ. ಸ್ಥಳೀಯರು ಚಳಿಗಾಲದಲ್ಲಿ ಇಲ್ಲಿಂದ ತೆರಳಬೇಕಾಗಿಲ್ಲ, ಹಾಗೂ ಶ್ರೀನಗರದಿಂದ ಕಾರ್ಗಿಲ್/ಲೇಹ್ಗೆ ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ" ಎಂದು ಅಬ್ದುಲ್ಲಾ ತಮ್ಮ ಬರೆದುಕೊಂಡಿದ್ದಾರೆ.
ಕಾಶ್ಮೀರದಲ್ಲಿ ಬಿಗಿ ಭದ್ರತೆ: ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಝಡ್-ಮೋರ್ಹ್ ಮತ್ತು ಇತರ ವಿಭಾಗಗಳಲ್ಲಿ ವಿಶೇಷ ರಕ್ಷಣಾ ಗುಂಪನ್ನು (ಎಸ್ಪಿಜಿ) ನಿಯೋಜಿಸಲಾಗಿದೆ.
"ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೆಚ್ಚುವರಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿವೆ. ವಿಶೇಷವಾಗಿ ಮಧ್ಯ ಕಾಶ್ಮೀರದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಕಣಿವೆಯ ನಿರ್ಣಾಯಕ ಭಾಗಗಳಲ್ಲಿ ಎಸ್‌ಪಿಜಿಯನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಸೇನೆ ಜಂಟಿ ತಂಡಗಳ ಮೂಲಕ ಭದ್ರತಾ ವ್ಯವಸ್ಥೆಗಳನ್ನು ತೀವ್ರಗೊಳಿಸಲಾಗಿದೆ. ಈ ಕ್ರಮಗಳು ಜನವರಿ 13ರವರೆಗೆ ಜಾರಿಯಲ್ಲಿರುತ್ತವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಏನಿದು ಝಡ್-ಮೋರ್ ಸುರಂಗಮಾರ್ಗ?: ಝಡ್-ಮೊರ್ಹ್ ಸುಮಾರು 6.4 ಕಿ.ಮೀ ಉದ್ದ ಸುರಂಗ ಮಾರ್ಗ. ಜನಪ್ರಿಯ ಪ್ರವಾಸಿ ತಾಣ ಸೋನ್ಮಾರ್ಗವನ್ನು ಮಧ್ಯ ಕಾಶ್ಮೀರದ ಗಂಡರ್ಬಲ್ ಜಿಲ್ಲೆಯ ಕಂಗನ್ ಪಟ್ಟಣದ ಜೊತೆಗೆ ಸಂಪರ್ಕಿಸುತ್ತದೆ. ಝಡ್ ಆಕಾರದ ರಸ್ತೆ ಭಾಗದಲ್ಲಿ ಇದನ್ನು ನಿರ್ಮಿಸಿರುವ ಕಾರಣ ಇದಕ್ಕೆ ಝಡ್ ಹೆಸರು ನೀಡಲಾಗಿದೆ. ಈ ಸುರಂಗ ಮಾರ್ಗ ನಿರ್ಮಾಣ, ತೀವ್ರ ಹಿಮಪಾತದಿಂದಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಹೋಗಲಾಗದ ಪ್ರದೇಶವಾದ ಸೋನ್ಮಾರ್ಗ್ಗೆ ಎಲ್ಲಾ ರೀತಿಯ ಹವಾಮಾನವಿದ್ದಾಗಲೂ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ.
More photos from the air of the area around the tunnel. pic.twitter.com/NdAToNGCW3
— Omar Abdullah (@OmarAbdullah) January 11, 2025
8,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಈ ಸುರಂಗಮಾರ್ಗದಿಂದಾಗಿ ಲಡಾಖ್ ಹಾಗೂ ಕಾಶ್ಮೀರವನ್ನು ಸಂಪರ್ಕಿಸುವ ಶ್ರೀನಗರ- ಲೇಹ್ ಮಾರ್ಗದ ಒಂದು ಭಾಗವಾದ ಸೋನ್ಮಾರ್ಗ್ಗೆ ವರ್ಷಪೂರ್ತಿ ಭೇಟಿ ನೀಡಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಸೇನಾ ಚಟುವಟಿಕೆಗಳಿಗೆ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೂ ಸಹಕಾರಿಯಾಗಿದೆ. ಇದು ಲಡಾಖ್‌ನಲ್ಲಿರುವ ಭಾರತೀಯ ಮಿಲಿಟರಿ ಸಿಬ್ಬಂದಿಗೆ, ವಿಶೇಷವಾಗಿ ಚೀನಾ-ಭಾರತ ವಾಸ್ತವಿಕ ನಿಯಂತ್ರಣ ರೇಖೆ (LAC) ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ಗಡಿಗೆ ಹತ್ತಿರವಿರುವ ಪ್ರದೇಶಗಳಿಗೆ ಪ್ರವೇಶವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಝಡ್-ಮೊರ್ಹ್ ಸುರಂಗ್ ಮಾರ್ಗ ನಿರ್ಮಾಣ ಯೋಜನೆಯನ್ನು ಆರಂಭದಲ್ಲಿ 2012ರಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಪಡೆದುಕೊಂಡಿತ್ತು. ನಂತರ ಅದನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ಗೆ ಹಸ್ತಾಂತರಿಸಲಾಯಿತು. ಮರು ಟೆಂಡರ್ ಪ್ರಕ್ರಿಯೆಯ ನಂತರ APCO ಇನ್ಫ್ರಾಟೆಕ್‌ಗೆ ನಿರ್ಮಾಣ ಒಪ್ಪಂದವನ್ನು ನೀಡಲಾಯಿತು. ವಿಶೇಷ ಉದ್ದೇಶದ ವಾಹನವಾದ APCO-ಶ್ರೀ ಅಮರನಾಥಜಿ ಸುರಂಗ ಖಾಸಗಿ ಲಿಮಿಟೆಡ್ ಮೂಲಕ ಯೋಜನೆಯನ್ನು ನಿರ್ವಹಿಸಿದೆ.
ಆರಂಭದ ಯೋಜನೆಯಂತೆ 2023ರ ಆಗಸ್ಟ್ ಓಳಗೆ ಸುರಂಗಮಾರ್ಗ ಪೂರ್ಣಗೊಳ್ಳಬೇಕಿತ್ತು. ಆದರೆ ಯೋಜನೆ ವಿಳಂಬದಿಂದಾಗಿ ಉದ್ಘಾಟನೆಯನ್ನು ಮುಂದೂಡಲಕಾಯಿತು. 2024ರಲ್ಲಿ ಫೆಬ್ರವರಿಯಲ್ಲಿ ಸಾಫ್ಟ್ ಲಾಂಚ್ ಆದರೂ ಜಮ್ಮು ಹಾಗೂ ಕಾಶ್ಮೀರ ವಿಧಾನಸಭಾ ಚುನಾವಣೆಯಿಂದಾಗಿ ಅಧಿಕೃತ ಉದ್ಘಾಟನೆ ವಳಂಬವಾಯಿತು.
ಯೋಜನೆ ಪ್ರಾರಂಭಗೊಂಡ 12 ವರ್ಷಗಳ ನಂತರ ಸುರಂಗಮಾರ್ಗವನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಮೇಲ್ಮೈ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಝಡ್-ಮೋರ್ಹ್ ಸುರಂಗ ಯೋಜನೆ ಮಹತ್ವ: ಸುಮಾರು 2,680 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಝಡ್-ಮೋರ್ಹ್ ಸುರಂಗಮಾರ್ಗ ದ್ವಿ-ಪಥದ ರಸ್ತೆಯನ್ನು ಒಳಗೊಂಡಿದೆ. ಈ ಪ್ರದೇಶದ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾದ ಎಸ್ಕೇಪ್ ಸುರಂಗ, ವಾತಾಯನ ವ್ಯವಸ್ಥೆಗಳು ಮತ್ತು ಕಲ್ವರ್ಟ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.