ಬೆಂಗಳೂರು: ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ರಸ್ತೆಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲುಗಳನ್ನು ಕೊಯ್ದಿದ್ದು, ಮೂಕರೋಧನೆ ಅನುಭವಿಸುತ್ತಿದ್ದ ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಕಾಟನ್‌ಪೇಟೆ ಠಾಣೆ ಪೊಲೀಸ್ ಸಿಬ್ಬಂದಿ, ಚಿಕ್ಕಪೇಟೆ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಪುಂಡರಿಗೆ ರಾಜ್ಯ ಸರ್ಕಾರದ ಬೆಂಬಲ-ಸಂಸದ ಪಿ.ಸಿ.ಮೋಹನ್: "ಮಾನವೀಯತೆ ಇಲ್ಲದ ಕ್ರೂರಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ. ಯಾರ ಬೆಂಬಲದಲ್ಲಿ ಇದನ್ನು ಮಾಡುತ್ತಿದ್ದಾರೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಘಟನಾ ಸ್ಥಳದಲ್ಲಿ ಎಲ್ಲಿಯೂ ಸಿಸಿಟಿವಿಯಿಲ್ಲ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ, ಪೊಲೀಸ್ ಇಲಾಖೆ ಸತ್ತುಹೋಗಿದೆ. ಈ ಏರಿಯಾದಲ್ಲಿ ಮಾದಕ ವ್ಯಸನಿಗಳ ಕಾಟ ಮಿತಿಮೀರಿದೆ. ಹೆಣ್ಣು ಮಕ್ಕಳು ಓಡಾಡಲೂ ಕಷ್ಟವಾಗುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಇಂಥ ಪುಂಡ -ಪೋಕರಿಗಳಿಗೆಲ್ಲ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ. ಯಾರು ಈ ಕೆಲಸ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆಯಾಗಬೇಕು" ಎಂದು ಸಂಸದ ಪಿ.ಸಿ.ಮೋಹನ್ ಆಗ್ರಹಿಸಿದರು.
ಕಣ್ಣೀರು ಹಾಕಿದ ಸ್ಥಳೀಯರು: "ಈ ಏರಿಯಾದಲ್ಲಿ ಮಾದಕ ವ್ಯಸನಿಗಳು, ಪುಂಡರ ಹಾವಳಿ ಮಿತಿ ಮೀರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ವಿಫಲರಾಗಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಮೂಕಪ್ರಾಣಿಗಳ ರೋಧನೆ ಕಂಡು ಕಣ್ಣೀರಿಟ್ಟರು.