ಶ್ರೀ ಮುಕ್ತಸರ ಸಾಹಿಬ್ (ಪಂಜಾಬ್): ಭರ್ಜರಿ ಕಾರ್ಯಾಚರಣೆ ನಡೆಸಿರುವ ಶ್ರೀ ಮುಕ್ತಸರ್ ಸಾಹಿಬ್ ಪೊಲೀಸರು ಶನಿವಾರ ತಡರಾತ್ರಿ ಲುಬಾನಿಯಾವಾಲಿ ಗ್ರಾಮದ ಬಳಿ ಗುಂಡು ಹಾರಿಸಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ.
ಗುತ್ತಿಗೆದಾರರಿಗೆ ₹1ಕೋಟಿ ಬೇಡಿಕೆ: ಆರೋಪಿಗಳು ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೆಂದು ಹೇಳಿಕೊಂಡು, ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ.
ಬಲೆ ಬೀಸಿ ಬಂಧಿಸಿದ ಪೊಲೀಸರು: ಶ್ರೀ ಮುಕ್ತಸರ ಸಾಹೇಬ ಸಮೀಪದ ರೂಪಾನ ಗ್ರಾಮದಲ್ಲಿರುವ ಗಿರಣಿ ಗುತ್ತಿಗೆದಾರನಿಗೆ ಲಾರೆನ್ಸ್ ಗ್ಯಾಂಗ್‌ನ ಸದಸ್ಯರೆಂದು ಹೇಳಿಕೊಂಡು ದೂರವಾಣಿ ಮೂಲಕ ಒಂದು ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಶ್ರೀ ಮುಕ್ತಸರ್ ಸಾಹಿಬ್ ಎಸ್‌ಎಸ್‌ಪಿ ತುಷಾರ್ ಗುಪ್ತಾ ಮಾತನಾಡಿ, 'ಸುಲಿಗೆಕೋರರು ಗುತ್ತಿಗೆದಾರನಿಂದ ಹಣ ಪಡೆಯಲು ಲುಬಾನಿಯಾವಾಲಿ ಗ್ರಾಮಕ್ಕೆ ಹೋಗಿದ್ದರು. ಈ ಬಗ್ಗೆ ಮಾಹಿತಿ ಅರಿತು ಸೂಕ್ತ ಪ್ಲಾನ್ನೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆಗ ಹಣ ತೆಗೆದುಕೊಂಡು ಹೋಗಲು ಅಲ್ಲಿಗೆ ಮೂವರು ಬೈಕ್ನಲ್ಲಿ ಬಂದಿದ್ದಾರೆ. ಹಣವನ್ನು ಪಡೆದ ಬಳಿಕ ಪೊಲೀಸರು ಸುತ್ತುವರಿದಿದ್ದಾರೆ ಎಂಬುದನ್ನು ಅರಿತ ಅವರಲ್ಲಿನ ಒಬ್ಬ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರೂ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಫೈರಿಂಗ್ನಲ್ಲಿ ಆರೋಪಿಯ ಸಹಚರರಲ್ಲಿ ಒಬ್ಬನಾದ ಸುಖ್ಮಂದರ್ ಸಿಂಗ್ ಎಂಬಾತ ಗುಂಡು ತಗುಲಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಪರಾರಿಯಾಗಲು ಯತ್ನಿಸುತ್ತಿದ್ದ ಸುಖ್ಮಂದರ್ ಸಿಂಗ್, ಲಖ್ವೀರ್ ಸಿಂಗ್ ಮತ್ತು ಸರ್ವಾನ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಕುಲ್ಗಾಮ್ನಲ್ಲಿ ಮೂವರು ಭಯೋತ್ಪಾದಕರು ಸೆರೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ - THREE TERRORIST ARRESTED