ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಸಭೆಯ ಎಲ್ಲ 288 ಕ್ಷೇತ್ರಗಳ ಚುನಾವಣೆಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ರಾಜ್ಯಾದ್ಯಂತ ಮತದಾನ ಶುರುವಾಯಿತು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸಿನಿಮಾ ನಟ ಅಕ್ಷಯ್ ಕುಮಾರ್ ತಮ್ಮ ತಮ್ಮ ಮತಗಟ್ಟೆಗೆ ಬಂದು ವೋಟ್ ಮಾಡಿದರು.
ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಂಬೈನಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಮತ ಹಾಕಿದರು. ನಾಂದೇಡ್‌ನಲ್ಲಿ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಶೋಕ್ ಚವ್ವಾಣ್ ವೋಟ್ ಹಾಕಿದರೆ, ನಟರಾದ ರಿತೇಶ್ ದೇಶ್‌ಮುಖ್, ಜಾನ್ ಅಬ್ರಹಾಂ ಮತ್ತು ಬಾಬಾ ಸಿದ್ದಿಕಿ ಪುತ್ರ ಝೀಶನ್ ಸಿದ್ದಿಕಿ ಮುಂಬೈನಲ್ಲಿ ಮತದಾನ ಮಾಡಿದ್ದಾರೆ.
ಮುಂಬೈನಲ್ಲಿ ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ವೋಟ್ ಹಾಕಿದ ಬಳಿಕ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪ್ರತಿಕ್ರಿಯಿಸಿ, "ಚುನಾವಣಾ ಆಯೋಗ ಮತಗಟ್ಟೆಗಳಲ್ಲಿ ಮತದಾನಕ್ಕೆ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿದೆ. ವಾರದ ಮಧ್ಯೆ ಮತದಾನ ನಡೆಯುತ್ತಿದೆ. ಹಾಗಾಗಿ, ಎಲ್ಲರೂ ಬಂದು ವೋಟ್ ಮಾಡುವ ನಿರೀಕ್ಷೆ ಇದೆ" ಎಂದರು.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್, ಮಗಳು ಸಾರಾ ತೆಂಡೂಲ್ಕರ್ ಜೊತೆಗೆ ಆಗಮಿಸಿ ವೋಟ್ ಮಾಡಿದರು.