ನವದೆಹಲಿ: 2025ರ ಚುನಾವಣೆಯ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ದೇವಸ್ಥಾನಗಳ ಅರ್ಚಕರು ಮತ್ತು ಗುರುದ್ವಾರಾಗಳ ಗ್ರಂಥಿಗಳಿಗೆ ಪ್ರತಿ ತಿಂಗಳು 18 ಸಾವಿರ ರೂಪಾಯಿ ಗೌರವ ಧನ ನೀಡುವ 'ಪೂಜಾರಿ, ಗ್ರಂಥಿ ಸಮ್ಮಾನ್ ಯೋಜನೆ' ಜಾರಿಗೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ
"ಇಂದು ಪ್ರಮುಖ ಯೋಜನೆಯೊಂದನ್ನು ಘೋಷಣೆ ಮಾಡುತ್ತಿದ್ದೇನೆ. ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ ಎಂದು ಈ ಯೋಜನೆಗೆ ಹೆಸರಿಡಲಾಗಿದ್ದು, ಇದರ ಅಡಿ, ದೇವಾಲಯಗಳ ಅರ್ಚಕರು ಮತ್ತು ಗುರುದ್ವಾರದ 'ಗ್ರಂಥಿಗಳಿಗೆ' ಗೌರವಧನ ನೀಡಲಾಗುವುದು. ಅರ್ಚಕರು ಮತ್ತು ಗ್ರಂಥಿಗಳಿಗೆ ತಿಂಗಳಿಗೆ ಸುಮಾರು 18,000 ರೂ. ಗೌರವಧನ ನೀಡಲಾಗುವುದು. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ." ಎಂದು ಕೇಜ್ರಿವಾಲ್ ಹೇಳಿದರು.
"ಪೂಜಾರಿಗಳು ನಮಗೆ ಹೇಗೆಲ್ಲ ಸೇವೆ ಸಲ್ಲಿಸುತ್ತಾರೆ ಎಂಬುದು ನಮಗೆ ತಿಳಿದಿದೆ. ನಮ್ಮ ಮಗುವಿನ ಜನ್ಮದಿನವಾಗಲಿ ಅಥವಾ ಪ್ರೀತಿಪಾತ್ರರ ಮರಣವಾಗಲಿ, ಅವರು ಯಾವಾಗಲೂ ನಮ್ಮನ್ನು ದೇವರೊಂದಿಗೆ ಸಂಪರ್ಕಿಸಿದ್ದಾರೆ. ಆದರೆ, ಅವರು ಎಂದಿಗೂ ತಮ್ಮ ಸ್ವಂತ ಕುಟುಂಬಗಳ ಬಗ್ಗೆ ಗಮನ ಹರಿಸಲಿಲ್ಲ ಮತ್ತು ನಾವೂ ಸಹ ಅವರ ಬಗ್ಗೆ ಕಾಳಜಿ ವಹಿಸಿಲ್ಲ. ಆದರೆ, ಇದೇ ಮೊದಲ ಬಾರಿಗೆ ನಾವು ಅವರಿಗೆ ಗೌರವ ಧನ ನೀಡುತ್ತಿದ್ದೇವೆ. ನಾವು ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಹಲವಾರು ಹೊಸ ಯೋಜನೆಗಳನ್ನು ಆರಂಭಿಸಿದ್ದೇವೆ. ಶಾಲೆ ಮತ್ತು ಆಸ್ಪತ್ರೆಗಳನ್ನು ಸುಧಾರಿಸಿದ್ದೇವೆ, ಮಹಿಳೆಯರಿಗೆ ಬಸ್ ಪ್ರಯಾಣದ ಅನುಕೂಲ ಮಾಡಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ನಮ್ಮಿಂದ ಪಾಠ ಕಲಿತು ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಈ ಯೋಜನೆಗಳನ್ನು ಜಾರಿಗೆ ತರಲಿ" ಎಂದು ಅವರು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಮತ್ತು ಪೊಲೀಸರನ್ನು ಕಳುಹಿಸುವ ಮೂಲಕ ಮಹಿಳಾ ಸಮ್ಮಾನ್ ಯೋಜನೆ ತಡೆಯಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಎಂದು ಆರೋಪಿಸಿದರು. ಆ ಯೋಜನೆಯಡಿ ಈಗಲೂ ನೋಂದಣಿ ನಡೆಯುತ್ತಿದೆ. ಅವರು ಸಂಜೀವಿನಿ ಯೋಜನೆ ನಿಲ್ಲಿಸಲು ಪ್ರಯತ್ನಿಸಿದರು, ಆದರೆ, ಸಾಧ್ಯವಾಗಲಿಲ್ಲ. ಈ ಯೋಜನೆಗೂ ಅವರು ಅದೇ ರೀತಿ ಅಡ್ಡಿ ಪಡಿಸದಿರಲಿ ಎಂದು ಹೇಳಿದರು.
ಇದಕ್ಕೂ ಮುನ್ನ ಸೋಮವಾರ, ವೇತನ ಬಿಡುಗಡೆಯಲ್ಲಿನ ವಿಳಂಬ ವಿರೋಧಿಸಿ ದೆಹಲಿ ವಕ್ಫ್ ಮಂಡಳಿಯ ಇಮಾಮ್ಗಳು ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಎಎನ್ಐ ಜೊತೆ ಮಾತನಾಡಿದ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಸಾಜಿದ್ ರಶೀದಿ, ದೆಹಲಿ ಸರ್ಕಾರವು ದೆಹಲಿ ವಕ್ಫ್ ಮಂಡಳಿಯ ಇಮಾಮ್ಗಳ ವೇತನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಹೊಸ ವರ್ಷಕ್ಕೆ ಹರಿದು ಬರಲಿರುವ ಭಕ್ತರು; ವಾರಾಣಸಿ ದೇಗುಲ ದರ್ಶನದಲ್ಲಿ ಕೆಲ ಬದಲಾವಣೆ - VARANASI KASHI VISHWANATH TEMPLE