ಥಾಣೆ (ಮಹಾರಾಷ್ಟ್ರ):ಮಾದಕ ದ್ರವ್ಯ ದಂಧೆಕೋರರನ್ನು ಬಂಧಿಸಲು ತೆರಳಿದ್ದ ಪೊಲೀಸ್ ತಂಡದ ಮೇಲೆ ಸುಮಾರು 20 ಜನರ ಗುಂಪೊಂದು ದಾಳಿ ನಡೆಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಓರ್ವ ಮಹಿಳಾ ಕಾನ್‌ಸ್ಟೇಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಧಾವಗಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಅಬ್ಬಾಸ್ ಅಲಿ ಮಿರ್ಜಾ, ಅಂಕುರ್ ಭಾರತಿ ಮತ್ತು ರಾಜು ಗೌತಮ್ ಎಂದು ಗುರುತಿಸಲಾಗಿದೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಉತ್ತನ್ ಸಾಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೀರಾ ಭಾಯಂದರ್-ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ ಆಂಟಿ ನಾರ್ಕೋಟಿಕ್ ಸೆಲ್ (ಎಎನ್‌ಸಿ)ನ ಪೊಲೀಸ್ ತಂಡವು ಡ್ರಗ್ ದಂಧೆಕೋರರನ್ನು ಬಂಧಿಸಲು ತೆರಳಿತ್ತು. ಈ ಪೊಲೀಸ್ ತಂಡದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಐವರು ಸಿಬ್ಬಂದಿಯನ್ನು ಒಳಗೊಂಡಿತ್ತು. ಆದರೆ, ರಾತ್ರಿ 9 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಬಿದಿರಿನ ಬಂಬುಗಳಿಂದ ಪೊಲೀಸ್ ತಂಡದ ಮೇಲೆ ದಾಳಿ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.