ನವದೆಹಲಿ: ಜಾಗತಿಕ ಪೌಷ್ಠಿಕಾಂಶದ ಬಿಕ್ಕಟ್ಟನ್ನು ಹೊಡೆದೋಡಿಸುವಲ್ಲಿ ಭಾರತದ ಅನೇಕ ಆಹಾರಗಳು ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. 32ನೇ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆಫ್ ಅಗ್ರಿಕಲ್ಚರ್ ಎಕನಾಮಿಸ್ಟ್ (ಐಸಿಎಇ)ಯಲ್ಲಿ ಮಾತನಾಡಿದ ಅವರು, ಜಗತ್ತಿನ ಸೂಪರ್ ಫುಡ್ಗಳ ಬುಟ್ಟಿಯಲ್ಲಿ ಭಾರತದ ಪಾಲನ್ನು ಹಂಚಿಕೊಳ್ಳಲು ಬಯಸುತ್ತದೆ ಎಂದರು.
ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ(ಮಿಲ್ಲೆಟ್) ಉತ್ಪಾದಿಸುವ ದೇಶ ಭಾರತವಾಗಿದೆ. ಜಗತ್ತು ಇದನ್ನು ಸೂಪರ್ ಫುಡ್ ಎಂದು ಕರೆಯುತ್ತದೆ. ಇದನ್ನು ನಾವು ಶ್ರೀಅನ್ನ ಎಂದು ಗುರುತಿಸಿದ್ದೇವೆ.
ಸಣ್ಣ ಹಿಡುವಳಿಗಾರರೇ ಬೆನ್ನೆಲುಬು: ಭಾರತದಲ್ಲಿನ ಶೇ 90ರಷ್ಟು ಕುಟುಂಬಗಳು ಸಣ್ಣ ಭೂಮಿಯನ್ನು ಹೊಂದಿದೆ. ಈ ಸಣ್ಣ ರೈತರೇ ಭಾರತದ ಆಹಾರ ಭದ್ರತೆಯ ಬೆನ್ನೆಲುಬಾಗಿದ್ದಾರೆ. ಏಷ್ಯಾದ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಈ ಹಿನ್ನೆಲೆ ಭಾರತದ ಮಾದರಿಗಳು ಅನೇಕ ದೇಶಗಳಿಗೆ ಪ್ರಯೋಜನವಾಗಲಿವೆ. ಭಾರತದ ಆಹಾರ ಭದ್ರತೆ ಜಗತ್ತಿನ ಕಾಳಜಿ ವಿಷಯವಾಗಿದ್ದ ಕಾಲವೊಂದಿತ್ತು. ಆದರೆ ಇದೀಗ ಭಾರತ ಜಾಗತಿಕ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆಯ ಪರಿಹಾರವನ್ನು ಒದಗಿಸುವಲ್ಲಿ ನಿರಂತರವಾಗಿದೆ ಎಂದರು.
ಆಯುರ್ವೇದ ವಿಜ್ಞಾನ ಕುರಿತು ಒತ್ತಿ ಹೇಳಿದ ಪ್ರಧಾನಿ, ಆಯುರ್ವೇದ ವಿಜ್ಞಾನವೂ ನಮ್ಮ ಆಹಾರದ ಜೊತೆಗಿನ ವೈದ್ಯಕೀಯ ಪರಿಣಾಮಗಳ ಬಳಕೆ ಮಾಡಿಕೊಂಡಿ ಪ್ರಯೋಜನಕಾರಿ ಮಾಹಿತಿಯನ್ನು ನೀಡುತ್ತಿದೆ. ಅವರ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯು ಭಾರತದ ಸಾಮಾಜಿಕ ಜೀವನದ ಭಾಗವಾಗಿದೆ. ಪ್ರಾಚೀನ ಭಾರತೀಯರು ಕೃಷಿ ಮತ್ತು ಆಹಾರದ ಅನುಭವ ಮತ್ತು ನಂಬಿಕೆಯನ್ನು ಹೊಂದಿದ್ದರು. ಭಾರತದಲ್ಲಿ ಕೃಷಿ ಸಂಪ್ರದಾಯವೂ ವಿಜ್ಞಾನ ಮತ್ತು ತರ್ಕಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.