ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 14ರಂದು ಕತಾರ್ ರಾಜಧಾನಿ ದೋಹಾಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸವನ್ನು ಮುಗಿಸಿದ ನಂತರ ಪ್ರಧಾನಿ ದೋಹಾಗೆ ಪ್ರಯಾಣಿಸುವರು. ಜೈಲಿನಲ್ಲಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕತಾರ್ ರಾಷ್ಟ್ರ ಬಿಡುಗಡೆ ಮಾಡಿದ ಒಂದು ದಿನದ ನಂತರ ಮೋದಿ ಕತಾರ್ ಭೇಟಿ ನೀಡುವ ಬಗ್ಗೆ ಸರ್ಕಾರ ಘೋಷಣೆ ಮಾಡಿದೆ. ಅವರಲ್ಲಿ ಏಳು ಮಂದಿ ಸೋಮವಾರ ಬೆಳಿಗ್ಗೆ ಭಾರತಕ್ಕೆ ಮರಳಿದರು.
ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಪ್ರಧಾನಿ ಮೋದಿ ಮತ್ತು ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ವಿಸ್ತೃತ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.
8 ಜನ ಭಾರತೀಯರನ್ನು ಬಿಡುಗಡೆ ಮಾಡಿದ ಕತಾರ್: ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ವರ್ಷ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ಮಾಜಿ ನೌಕಾ ಅಧಿಕಾರಿಗಳನ್ನು ಕತಾರ್ ಬಿಡುಗಡೆ ಮಾಡಿದೆ ಎಂದು ಭಾರತ ಸರ್ಕಾರ ಸೋಮವಾರ ಬೆಳಿಗ್ಗೆ ತಿಳಿಸಿದೆ. ದೋಹಾ ಮೂಲದ ರಕ್ಷಣಾ ಉಪಕರಣಗಳನ್ನು ತಯಾರಿಸುವ ಕಂಪನಿ ದಹ್ರಾ ಗ್ಲೋಬಲ್ನಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಆಗಸ್ಟ್ 2022 ರಲ್ಲಿ ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ನಂತರ ಕಳೆದ ವರ್ಷ ಅಕ್ಟೋಬರ್ ನಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.