ನವದೆಹಲಿ:ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 10 ದಿನಗಳಲ್ಲಿ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ 29 ಕಾರ್ಯಕ್ರಮಗಳಲ್ಲಿ ಅವಿರತವಾಗಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಹಂಚಿಕೊಂಡ ವೇಳಾಪಟ್ಟಿಯ ಪ್ರಕಾರ, ಮೋದಿ ಮುಂದಿನ ಹತ್ತು ದಿನಗಳಲ್ಲಿ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಅವರು ಹತ್ತಾರು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಚಾಲನೆ ನೀಡಲಿದ್ದಾರೆ.
ಪ್ರಧಾನಿಯ ವೇಳಾಪಟ್ಟಿ ಹೀಗಿದೆ:
ಮಾರ್ಚ್ 4:ಮೊದಲು ತೆಲಂಗಾಣಕ್ಕೆ ಭೇಟಿ ನೀಡಲಿರುವ ಪ್ರಧಾನಿ ಅದಿಲಾಬಾದ್‌ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ನಂತರ ಅವರು ತಮಿಳುನಾಡಿನ ಕಲ್ಪಾಕ್ಕಂಗೆ ತೆರಳಲಿದ್ದಾರೆ. ಅಲ್ಲಿ ಅವರು ಭಾರತೀಯ ನಭಿಕಿಯಾ ವಿದ್ಯುತ್ ನಿಗಮ ಲಿಮಿಟೆಡ್ಗೆ ಭೇಟಿ ನೀಡುವರು. ಚೆನ್ನೈನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಹೈದರಾಬಾದ್‌ಗೆ ವಾಪಸ್ ಆಗಲಿದ್ದಾರೆ.
ಮಾರ್ಚ್ 5:2ನೇ ದಿನದ ಪ್ರವಾಸದಲ್ಲಿ, ಪ್ರಧಾನಿಗಳು ತೆಲಂಗಾಣದ ಸಂಗಾರೆಡ್ಡಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಒಡಿಶಾಗೆ ಪ್ರಯಾಣಿಸಿ, ಚಂಡಿಖೋಲೆಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಬಳಿಕ ಅವರು ಪಶ್ಚಿಮ ಬಂಗಾಳಕ್ಕೆ ತೆರಳುವರು.
ಮಾರ್ಚ್ 6:ಸಿಎಂ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ 15,400 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡುವರು. ಇದರ ಬಳಿಕ ಬಿಹಾರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು 12,800 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ಮಾರ್ಚ್ 7:ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ. 2019 ರಲ್ಲಿ 370 ನೇ ವಿಧಿ ರದ್ದು ನಂತರ ಕಾಶ್ಮೀರಕ್ಕೆ ಪಿಎಂ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಕೆಲ ದಿನಗಳ ಹಿಂದೆ ಜಮ್ಮುವಿಗೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಅಲ್ಲಿಂದ ವಾಪಸ್ ನವದೆಹಲಿಗೆ ಮಾಧ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.