ಕಛ್ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ಎಂದಿನಂತೆ ಈ ಬಾರಿಯೂ ಕೂಡ ಬಿಎಸ್ಎಫ್, ಸೇನೆ, ನೌಕಾ ಮತ್ತು ವಾಯು ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಗುಜರಾತ್ನ ಕಛ್ನಲ್ಲಿನ ಸರ್ ಕ್ರಿಕ್ನ ಲಕ್ಕಿ ನಾಲಾದಲ್ಲಿ ನಡೆದ ಈ ಆಚರಣೆಯಲ್ಲಿ ಭಾಗಿಯಾದರು.
ಈ ಪ್ರದೇಶವು ಯಾವುದೇ ಅತಿಥ್ಯರಹಿತ ತಾಣವಾಗಿದ್ದು, ಇಲ್ಲಿ ಬೆಳಗಿನ ಹೊತ್ತು ಸುಡು ಬಿಸಿಲಿದ್ದರೆ, ಸಂಜೆಹೊತ್ತು ಮೈಕೊರೆಯುವ ಚಳಿ ಇರುತ್ತದೆ. ಇಲ್ಲಿನ ಭೂ ಪ್ರದೇಶ ಕೂಡ ಸವಾಲಿನಿಂದ ಕೂಡಿರುತ್ತದೆ. 2014ರಿಂದ ತಾವು ಪ್ರಧಾನಿಯಾದಾಗಿನಿಂದಲೂ ಪ್ರಧಾನಿ ಮೋದಿ ಅವರು ಗಡಿಕಾಯುವ ಯೋಧರ ಜೊತೆ ದೀಪಾವಳಿ ಆಚರಿಸುತ್ತ ಬಂದಿದ್ದಾರೆ. ಈ ಸಂಭ್ರಮಾಚರಣೆಗೂ ಮುನ್ನ ಅವರು ದೇಶದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
ಈ ದೈವಿಕ ಬೆಳಕು ಎಲ್ಲರಿಗೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಜೀವನದಲ್ಲಿ ತರಲಿ. ತಾಯಿ ಲಕ್ಷ್ಮಿ ಮತ್ತು ಗಣೇಶನ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಎಕ್ಸ್ನಲ್ಲಿ ಶುಭಾಶಯ ತಿಳಿಸಿದ್ದರು. ಅಲ್ಲದೆ ರಾಷ್ಟ್ರೀಯ ಏಕತಾ ದಿನದ ಹಿನ್ನೆಲೆ ಅವರು ಗುಜರಾತ್ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ನನ್ನ ನಮನಗಳು. ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ರಕ್ಷಣೆ ಮಾಡುವುದು ಅವರ ಜೀವನದ ಪ್ರಮುಖ ಆದ್ಯತೆಯಾಗಿತ್ತು. ಅವರ ವ್ಯಕ್ತಿತ್ವ ಮತ್ತು ಕೆಲಸವು ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದರು.