ಪುಷ್ಕರ್ (ರಾಜಸ್ಥಾನ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಕಟಿಸಿದ ಪ್ರಣಾಳಿಕೆಯನ್ನು ಸುಳ್ಳಿನ ಕಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯು ಸ್ವಾತಂತ್ರ್ಯ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಹೊಂದಿದ್ದ ಚಿಂತನೆಯನ್ನೇ ಪ್ರತಿಬಿಂಬಿಸುತ್ತದೆ ಎಂದೂ ಅವರು ದೂರಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಪ್ರಚಾರದ ನಾಯಕತ್ವ ವಹಿಸಿಕೊಂಡಿರುವ ಪ್ರಧಾನಿ ಮೋದಿ, ಚುನಾವಣಾ ರ‍್ಯಾಲಿಗಳನ್ನು ನಡೆಸುತ್ತಲೇ ಕಾಂಗ್ರೆಸ್ ಮತ್ತು ಅವರ ಮೈತ್ರಿಕೂಟದ ಪಕ್ಷಗಳನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ರಾಜಸ್ಥಾನದ ಪುಷ್ಕರ್‌ನಲ್ಲಿ ಇಂದು ಮೂರನೇ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಪ್ರಣಾಳಿಕೆಗೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದರು.
ಈ ಪ್ರಣಾಳಿಕೆಯ ಮೂಲಕ ಕಾಂಗ್ರೆಸ್ ಇಂದು ಮುಸ್ಲಿಂ ಲೀಗ್‌ನ ವಿಚಾರಗಳನ್ನು ಭಾರತದ ಮೇಲೆ ಹೇರಲು ಬಯಸಿದೆ. ಅಲ್ಲದೇ, ಈ ಪ್ರಣಾಳಿಕೆಯು ಕಾಂಗ್ರೆಸ್‌ನ ಸುಳ್ಳಿನ ಕಂತೆ ಒಂದು ದೊಡ್ಡ ಸತ್ಯವನ್ನು ತೆರೆದಿಟ್ಟಿದೆ. ಪ್ರತಿ ಪುಟದಲ್ಲೂ ಭಾರತವನ್ನು ಒಡೆಯುವ 'ವಾಸನೆ' ಇದೆ. ಮುಸ್ಲಿಂ ಲೀಗ್‌ನ ಛಾಪು ಹೊಂದಿರುವ ಪ್ರಣಾಳಿಕೆಯ ಉಳಿದ ಭಾಗದಲ್ಲಿ ಎಡಪಂಥೀಯರು ಪ್ರಾಬಲ್ಯ ಸಾಧಿಸಿದ್ದಾರೆ ಎಂದು ಮೋದಿ ಆರೋಪಿಸಿದರು.
ಇಂದಿನ ಕಾಂಗ್ರೆಸ್ಸಿಗೆ ತತ್ವಗಳಾಗಲಿ ನೀತಿಗಳಾಗಲಿ ಉಳಿದಿಲ್ಲ. ಕಾಂಗ್ರೆಸ್ ಎಲ್ಲವನ್ನೂ ಹೊರಗುತ್ತಿಗೆ ನೀಡಿದೆ ಎಂದು ತೋರುತ್ತದೆ. ಇಂತಹ ಕಾಂಗ್ರೆಸ್ ದೇಶದ ಹಿತದೃಷ್ಟಿಯಿಂದ ಯಾವುದೇ ಕೆಲಸ ಮಾಡಲು ಸಾಧ್ಯವೇ ಎಂದು ಅವರು ವ್ಯಂಗ್ಯವಾಡಿದರು. ಅಷ್ಟೇ ಅಲ್ಲ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶವನ್ನು ಶತಮಾನಕ್ಕೆ ತಳ್ಳುವ ಅಜೆಂಡಾವನ್ನು ಮಂಡಿಸಿದೆ. ಬಡವರು ಮತ್ತು ವಂಚಿತ ವರ್ಗ, ಮಹಿಳಾ ಶಕ್ತಿಯ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಕಿಡಿಕಾರಿದರು.
ಭ್ರಷ್ಟಾಚಾರವನ್ನೇ ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಣವನ್ನು ಮಧ್ಯದಲ್ಲಿ ಲೂಟಿ ಮಾಡಲಾಗುತ್ತಿತ್ತು. ಕಾಂಗ್ರೆಸ್ 10 ಕೋಟಿಗೂ ಹೆಚ್ಚು ನಕಲಿ ಫಲಾನುಭವಿಗಳನ್ನು ಸೃಷ್ಟಿಸಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಹಣ ಕಾಂಗ್ರೆಸ್‌ನ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನಾನು ತನಿಖಾ ಸಂಸ್ಥೆಗಳಿಗೆ ಮುಕ್ತ ಹಸ್ತ ನೀಡಿದ್ದೇನೆ. ಕಾಂಗ್ರೆಸ್ ಸಂಸದರೊಬ್ಬರಿಂದ 300 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್‌ನ ದುರಹಂಕಾರದ ಮೈತ್ರಿಕೂಟವು ನನ್ನ ಮೇಲೆ ಸಿಟ್ಟಿಗೆದ್ದು ನಿಂದಿಸುತ್ತಿದೆ. ಆದರೆ, ಕೆಸರು ಎರಚಿದಷ್ಟು ಕಮಲ ಅರಳುತ್ತದೆ. ಭ್ರಷ್ಟಾಚಾರದಲ್ಲಿ ತೊಲಗಿ ಎಂದು ನಾನು ಹೇಳುತ್ತೇನೆ. ಅವರು ಭ್ರಷ್ಟರನ್ನು ಉಳಿಸಿ ಎನ್ನುತ್ತಾರೆ. ಎಷ್ಟೇ ಹೇಳಿದರೂ ಭ್ರಷ್ಟಾಚಾರದ ವಿರುದ್ಧ ಮೋದಿಯವರ ಹೋರಾಟ ಮುಂದುವರಿಯುತ್ತದೆ. ನಿಮ್ಮ ಆಶೀರ್ವಾದವಿದ್ದರೆ ನಾನು ಹೋರಾಟವನ್ನು ಮುಂದುವರಿಸುತ್ತೇನೆ. ನನ್ನ ಸರ್ಕಾರದ ಮೂರನೇ ಅವಧಿ ದೂರವಿಲ್ಲ. ಮೊದಲ 100 ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ, ಪಕ್ಷಾಂತರಕ್ಕೆ ಕಡಿವಾಣ, ಇವಿಎಂ ಸುಧಾರಣೆ ಭರವಸೆ ನೀಡಿದ ಕಾಂಗ್ರೆಸ್