ದ್ವಾರಕಾ (ಗುಜರಾತ್):ಇಲ್ಲಿನ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಮುಳುಗಿರುವ ಪ್ರಾಚೀನ ದ್ವಾರಕಾ ನಗರಕ್ಕೆ ಸ್ಕೂಬಾ ಡೈವಿಂಗ್ ಮೂಲಕ ನೀರಲ್ಲಿ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದ್ದಾರೆ. ಅಲ್ಲಿನ ಐತಿಹಾಸಿಕ ಸ್ಥಳವನ್ನೂ ಇದೇ ವೇಳೆ ವೀಕ್ಷಿಸಿದರು. ದೈವಿಕ ಅನುಭವ ಪಡೆದೆ ಎಂದು ಹೇಳಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗುಜರಾತ್ಗೆ ಭಾನುವಾರ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು, ಪಂಚಕುಯಿ ಕರಾವಳಿ ಪ್ರದೇಶಕ್ಕೆ ತೆರಳಿದರು. ದ್ವಾಪರಯುಗದಲ್ಲಿ ಮುಳುಗಿದೆ ಎಂದು ಐತಿಹಾಸಿಕ ಪುರಾವೆಗಳು ಸಿಕ್ಕಿರುವ ಶ್ರೀಕೃಷ್ಣನು ನಿರ್ಮಿಸಿದ್ದ ದ್ವಾರಕಾನಗರದ ಜಾಗಕ್ಕೆ ಈಜುಗಾರರ ಸಹಾಯದೊಂದಿಗೆ ತೆರಳಿದ ಪ್ರಧಾನಿ, ಅಲ್ಲಿ ನವಿಲುಗರಿಯನ್ನು ಇಟ್ಟು ಕೆಲ ಹೊತ್ತು ಪೂಜೆ ಸಲ್ಲಿಸಿದರು.
ಚಿತ್ರಗಳನ್ನು ಹಂಚಿಕೊಂಡ ಮೋದಿ:ಸಮುದ್ರದಾಳದಲ್ಲಿ ಮುಳುಗುವ ಧೈರ್ಯಕ್ಕಿಂತ ಹೆಚ್ಚಾಗಿ, ಶ್ರೀಕೃಷ್ಣನ ಮೇಲಿನ ಭಕ್ತಿ ಮತ್ತು ನಂಬಿಕೆ ಇತ್ತು ಎಂದು ಅವರು ನೀರಿನಿಂದ ಹೊರಬಂದ ಬಳಿಕ ಹೇಳಿದ್ದಾರೆ. ಇದರ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ, ಇಲ್ಲಿ ಪ್ರಾರ್ಥಿಸಿ ದೈವಿಕ ಅನುಭವ ಪಡೆದುಕೊಂಡೆ. ಸಮುದ್ರದಲ್ಲಿ ದ್ವಾರಕಾ ನಗರದ ದರ್ಶನವು 'ಅಭಿವೃದ್ಧಿ ಹೊಂದಿದ ಭಾರತ'ದ ನನ್ನ ಸಂಕಲ್ಪ ಮತ್ತಷ್ಟು ಬಲಗೊಂಡಿದೆ ಎಂದು ಅವರು ಹೇಳಿದ್ದಾರೆ.