ನವದೆಹಲಿ: ದೇಶದಲ್ಲಿ ಬೇಸಿಗೆ ಇದ್ದು, ಸೂರ್ಯನ ಪ್ರಖರತೆ ಹೆಚ್ಚುತ್ತಿದೆ. ಹಲವು ರಾಜ್ಯಗಳು ಬಿಸಿಗಾಳಿಯ ಹೊಡೆತಕ್ಕೆ ಹೈರಾಣಾಗಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಬೇಸಿಗೆ ನಿಭಾಯಿಸಲು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಇದೇ ವೇಳೆ, ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಏಪ್ರಿಲ್ ಮಧ್ಯಭಾಗದಿಂದ ಜೂನ್ವರೆಗೆ ಬಿಸಿ ಹವಾಮಾನ ಇರಲಿದ್ದು, ಈ ಅವಧಿಯ ತಾಪಮಾನದ ಮುನ್ನೋಟದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಅಧಿಕಾರಿಗಳು ವಿವರಣೆ ನೀಡಿದರು. ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸಂಭವನೀಯತೆ ಇದೆ. ಮಧ್ಯ ಮತ್ತು ಪಶ್ಚಿಮ ಪರ್ಯಾಯ ಭಾರತದ ಮೇಲೆ ಬಿಸಿಗಾಳಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಪ್ರಧಾನಿಗಳ ಗಮನಕ್ಕೆ ತಂದರು. ಅಗತ್ಯ ಔಷಧಗಳು, ಇಂಟ್ರಾವೆನಸ್ ದ್ರವಗಳು, ಐಸ್ ಪ್ಯಾಕ್‌ಗಳು, ಒಆರ್‌ಎಸ್ ಮತ್ತು ಕುಡಿಯುವ ನೀರಿನ ಲಭ್ಯತೆ ಹಾಗೂ ಆರೋಗ್ಯ ವಲಯದಲ್ಲಿನ ಸನ್ನದ್ಧತೆಗಳ ಬಗ್ಗೆ ಮೋದಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ದೂರದರ್ಶನ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳಂತಹ ಎಲ್ಲ ವೇದಿಕೆಗಳ ಮೂಲಕ ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಅಗತ್ಯ IEC/ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಸಲಹೆ ನೀಡಲಾಗಿದೆ. 2024 ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬೇಸಿಗೆಯನ್ನು ನಿರೀಕ್ಷಿಸಲಾಗಿದೆ. ಇನ್ನು ಈ ವರ್ಷ ಸಾರ್ವತ್ರಿಕ ಚುನಾವಣೆ ಕೂಡಾ ಇದೆ.