ಭುವನೇಶ್ವರ್(ಒಡಿಶಾ):ಮಾಜಿ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ಪಕ್ಷ(ಬಿಜೆಡಿ) ಕೇಂದ್ರದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿತ್ತು. ಆದರೆ, ಈ ಬಾರಿ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಲು ನಿರ್ಧರಿಸಿದೆ. ಇಂದಿನಿಂದ ಆರಂಭವಾಗಿರುವ ಸಂಸತ್ ಕಲಾಪದಲ್ಲಿ ಒಡಿಶಾದ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಂಡಿದೆ.
ಪಕ್ಷದ 9 ರಾಜ್ಯಸಭಾ ಸದಸ್ಯರೊಂದಿಗೆ ನವೀನ್ ಪಟ್ನಾಯಕ್ ಸೋಮವಾರ ಸಭೆ ನಡೆಸಿದ್ದು, ಅಧಿವೇಶನದಲ್ಲಿ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿಗೆ ಬೆಂಬಲವಾಗಿರದೇ, ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಬೇಕು. ರಾಜ್ಯದ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಸದನದ ಮುಂದೆ ಸೂಕ್ತವಾಗಿ ಪ್ರಸ್ತಾಪಿಸಬೇಕು ಎಂದು ಕೋರಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯಲ್ಲಿ ಪಕ್ಷದ ನಾಯಕ ಸಸ್ಮಿತ್ ಪಾತ್ರಾ, "ಬಿಜೆಡಿ ಸಂಸದರು ಈ ಬಾರಿ ಸಮಸ್ಯೆಗಳ ಬಗ್ಗೆ ಮಾತನಾಡುವುದಲ್ಲದೇ, ಸರ್ಕಾರದ ವಿರುದ್ಧ ಪ್ರತಿಭಟನೆ ಕೂಡ ನಡೆಸಲಿದ್ದಾರೆ. ಒಡಿಶಾಗೆ ವಿಶೇಷ ಸ್ಥಾನಮಾನ ಬೇಡಿಕೆ, ಕಳಪೆ ಮೊಬೈಲ್ ಸಂಪರ್ಕ, ಬ್ಯಾಂಕ್ ಶಾಖೆಗಳ ವಿಸ್ತರಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಲಿದೆ" ಎಂದು ತಿಳಿಸಿದರು.
"ಕಲ್ಲಿದ್ದಲು ರಾಯಧನವನ್ನು ಪರಿಷ್ಕರಿಸಬೇಕು ಎಂಬ ಒಡಿಶಾದ ಬೇಡಿಕೆಯನ್ನು ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ನಿರ್ಲಕ್ಷಿಸಿದೆ. ಇದರಿಂದ ರಾಜ್ಯದ ಜನರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ಇದು ಜನರಿಗೆ ಹೆಚ್ಚಿನ ನಷ್ಟ ಉಂಟು ಮಾಡುತ್ತಿದೆ. ಈ ಬಗ್ಗೆಯೂ ಸದನದಲ್ಲಿ ಧ್ವನಿ ಎತ್ತಲಾಗುವುದು" ಎಂದು ಅವರು ಹೇಳಿದರು.