ವರಂಗಲ್, ತೆಲಂಗಾಣ: ವರಂಗಲ್ ಜಿಲ್ಲೆಯ ರಾಯಪರ್ತಿ ಮಂಡಲದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ಅತಿದೊಡ್ಡದೊಂದು ದರೋಡೆ ಮಾಡಿದ್ದಾರೆ. ಅಂದಾಜು ₹14.94 ಕೋಟಿ ಮೌಲ್ಯದ ಸುಮಾರು 19 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬ್ಯಾಂಕ್‌ನ ಸುರಕ್ಷತಾ ಲಾಕರ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನವಾಗಿದ್ದು, ಸುಮಾರು 500 ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದರೋಡೆ ಬಯಲಾಗಿದ್ದು ಹೇಗೆ?: ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ದರೋಡೆಕೋರರು ಈ ಸಮಯವನ್ನೇ ದುರ್ಬಳಕೆ ಮಾಡಿಕೊಂಡು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅವರು ಈ ಕಳವು ಗೊತ್ತಾಗದಿರುವಂತೆ ಯೋಜನೆ ರೂಪಿಸಿ ಈ ಕಳ್ಳತನ ಮಾಡಲಾಗಿದೆ. ಇದಕ್ಕಾಗಿ ಅವರು ಅಲಾರಾಂ ಅಥವಾ ಅಲರ್ಟ್ ಕರೆ ಗಂಟೆಗಳ ತಂತಿಗಳನ್ನು ಕತ್ತರಿಸುವ ಮೂಲಕ ದರೋಡೆ ಕೃತ್ಯಕ್ಕೆ ಇಳಿದಿದ್ದಾರೆ. ಕಿಟಕಿಯ ಕಬ್ಬಿಣದ ಗ್ರಿಲ್ ಗಳನ್ನು ಕತ್ತರಿಸಿ ಆ ಮೂಲಕ ಬ್ಯಾಂಕ್‌ನ ಒಳ ಪ್ರವೇಶ ಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಷ್ಟೇ ಅಲ್ಲ ಈ ಕೃತ್ಯದ ಯಾವುದೇ ಕುರುಹು ಉಳಿಯದಂತೆ ಸಾಕ್ಷ್ಯ ನಾಶಕ್ಕಾಗಿ ಹಾರ್ಡ್ ಡಿಸ್ಕ್ ಕೂಡಾ ಕದ್ದಿದ್ದಾರೆ.
ಕಳ್ಳರು ತಮ್ಮೊಂದಿಗೆ ತಂದಿದ್ದ ಗ್ಯಾಸ್ ಕಟರ್ ಬಳಸಿ ಬ್ಯಾಂಕ್‌ನ ಮೂರು ಸುರಕ್ಷತಾ ಲಾಕರ್‌ಗಳಲ್ಲಿ ಒಂದನ್ನು ಒಡೆದಿದ್ದಾರೆ. ಲಾಕರ್ ನಲ್ಲಿ ಗ್ರಾಹಕರಿಗೆ ಸೇರಿದ 497 ಪ್ಯಾಕೆಟ್ ಚಿನ್ನಾಭರಣಗಳನ್ನು ಎಗರಿಸಿದ್ದಾರೆ. ದರೋಡೆಕೋರರು ಪರಾರಿಯಾಗುವ ಮೊದಲು ಗ್ಯಾಸ್ ಕಟರ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ದರೋಡೆಕೋರರಿಗಾಗಿ ಪೊಲೀಸರ ಶೋಧ: ಮಂಗಳವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ಗೆ ಆಗಮಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವರ್ಧನ್ನಪೇಟೆ ಸಿಐ ಶ್ರೀನಿವಾಸರಾವ್, ಎಸ್‌ಐಗಳಾದ ಶ್ರವಣ್ ಕುಮಾರ್, ರಾಜು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸುದ್ದಿ ತಿಳಿದಿ ಪಶ್ಚಿಮ ವಲಯ ಡಿಸಿಪಿ ರಾಜಮಹೇಂದ್ರ ನಾಯಕ್ ಅವರು ಶಾಖೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಬ್ಯಾಂಕ್ ಗ್ರಾಹಕರಲ್ಲಿ ಆವರಿಸಿದ ಭಯ: ದರೋಡೆಯ ಸುದ್ದಿ ಗ್ರಾಹಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ದರೋಡೆ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಬ್ಯಾಂಕ್ಗೆ ಧಾವಿಸಿ ಬಂದಿದ್ದಾರೆ. ಬ್ಯಾಂಕ್ ಸಿಬ್ಬಂದಿಯಲ್ಲಿ ತಮ್ಮ ಹಣ ಹಾಗೂ ಆಭರಣಗಳ ಬಗ್ಗೆ ಸ್ಪಷ್ಟೀಕರಣವನ್ನು ಬಯಸಿದ್ದಾರೆ. ಬೆಲೆಬಾಳುವ ವಸ್ತುಗಳ ಖಾತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ಭರವಸೆ ನೀಡಿದ್ದಾರೆ.

ಭದ್ರತಾ ಲೋಪ ಆಗಿದ್ದು ಎಲ್ಲಿ?: ಈ ಶಾಖೆಯಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಎರಡು ವರ್ಷಗಳ ಹಿಂದೆ ಇದೇ ಬ್ಯಾಂಕ್‌ನಲ್ಲಿ ದರೋಡೆ ಯತ್ನ ನಡೆದಿತ್ತು. ಆ ಪ್ರಯತ್ನದ ನಂತರ, ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಕಳೆದ ವರ್ಷದಿಂದ ಆ ಹುದ್ದೆ ಖಾಲಿಯಾಗಿದೆ.
ಚುರುಕಾಗಿ ಸಾಗಿದ ತನಿಖೆ: ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರವಾದ ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಕೈಬಿಡಲಾದ ಗ್ಯಾಸ್ ಕಟ್ಟರ್ ಸೇರಿದಂತೆ ಸುಳಿವುಗಳನ್ನು ಹುಡುಕುತ್ತಿದ್ದಾರೆ ಮತ್ತು ಬ್ಯಾಂಕಿನ ಸೆಟ್ ಅಪ್ ಬಗ್ಗೆ ಯಾವುದೇ ಪೂರ್ವ ಜ್ಞಾನವನ್ನು ಬಳಸಿಕೊಳ್ಳಲಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.