ಬೆಂಗಳೂರು: ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ಗೊಂದಲದಲ್ಲಿ ಸಿಲುಕಿರುವ ಮತ್ತು ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ರೋಗಿಗಳಿಗೆ ಅದರ ಅಗತ್ಯತೆಯ ಬಗ್ಗೆ ತಜ್ಞ ವೈದ್ಯರಿಂದ 'ಸೆಕೆಂಡ್ ಒಪಿನಿಯನ್' ನೀಡಿ ರೋಗಿಗಳ ಆತಂಕ ದೂರಮಾಡುವ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಜಾರಿಗೆ ತಂದಿದೆ.
ಕೀಲು ಮೂಳೆ, ಮೊಣಕಾಲು ನೋವು, ಮೊಣಕಾಲು ಚಿಪ್ಪು ಬದಲಾವಣೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕೆನ್ನುವ ವೇಳೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ತಜ್ಞ ವೈದ್ಯರನ್ನು ಸಂಪರ್ಕಿಸಿದರೆ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಎರಡನೇ ಅಭಿಪ್ರಾಯದೊಂದಿಗೆ ಸಮಯೋಚಿತ ಸಲಹೆ ನೀಡಲಿದ್ದಾರೆ.
ಶಸ್ತ್ರಚಿಕಿತ್ಸೆ ಬಗ್ಗೆ ಬಹಳಷ್ಟು ರೋಗಿಗಳಲ್ಲಿ ಆತಂಕವಿರುತ್ತದೆ. ಖರ್ಚು ವೆಚ್ಚ, ಚಿಕಿತ್ಸೆಯ ನಂತರ ಅನುಭವಿಸುವ ಯಾತನೆ, ಶಸ್ತ್ರಚಿಕಿತ್ಸೆ ಹೊರತುಪಡಿಸಿ ಪರ್ಯಾಯ ಚಿಕಿತ್ಸೆ ಸಾಧ್ಯತೆಗಳ ಬಗ್ಗೆ ಸರಿಯಾದ ಮಾರ್ಗದರ್ಶನ ಕೊರತೆಯಿಂದ ಗೊಂದಲಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ 'ಉಚಿತ ಸೆಕೆಂಡ್ ಒಪಿನಿಯನ್' ರೋಗಿಗಳ ನೆರವಿಗೆ ಬರಲಿದೆ.
ಆರೋಗ್ಯ ಸಚಿವರಿಂದ ಚಾಲನೆ: ಬೆಂಗಳೂರಿನ ಆರೋಗ್ಯಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ದೇಶದಲ್ಲಿಯೇ ವಿನೂತನ ಮತ್ತು ಮಾದರಿ ಯೋಜನೆ ಇದಾಗಲಿದೆ ಎಂದು ತಿಳಿಸಿದ ಸಚಿವರು, ಆರಂಭದಲ್ಲಿ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಸೇವೆ ಲಭ್ಯವಿರಲಿದೆ ಎಂದು ಹೇಳಿದ್ದಾರೆ.
ಪರ್ಯಾಯ ಚಿಕಿತ್ಸೆ ಬಗ್ಗೆಯೂ ಮಾಹಿತಿ: ರಾಜ್ಯದ ಎಲ್ಲಾ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆ ಒದಗಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ಹೊಂದಿದೆ. ತಜ್ಞ ವೈದ್ಯರುಗಳ ತಂಡವು 'ಸೆಕೆಂಡ್ ಒಪಿನಿಯನ್' ಕೋರುವ ರೋಗಿಗಳ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ಸರ್ಜರಿ ಬಗ್ಗೆ ವೈದ್ಯರ, ಆಸ್ಪತ್ರೆಗಳ ಮುಖ್ಯಸ್ಥರ ಶಿಫಾರಸುಗಳ ಪರಿಶೀಲನೆ ನಡೆಸಿ ಸರ್ಜರಿ ಅವಶ್ಯಕತೆ ಬಗ್ಗೆ ತಿಳಿಸಲಿದೆ. ಸರ್ಜರಿ ಬೇಡವಾಗಿದ್ದರೆ ಅಗತ್ಯವಿಲ್ಲದಿರುವುದು ಹಾಗೂ ಪರ್ಯಾಯ ಚಿಕಿತ್ಸೆ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ರೋಗಿಯ ಸ್ಥಿತಿಗತಿ ಗಮನಿಸಿ ಸದ್ಯಕ್ಕೆ ಸರ್ಜರಿ ಅನಗತ್ಯವೆನಿಸಿದರೆ ನಂತರದ ವರ್ಷಗಳಲ್ಲಿ ಶಸ್ತ್ರಚಿಕಿತ್ಸೆ ಪಡೆಯುವ ಬಗ್ಗೆ ತಿಳಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಹಂತದಲ್ಲಿ, TKR/THR ಚಿಕಿತ್ಸಾ ವಿಧಾನಗಳಿಗೆ ಎರಡನೇ ವೈದ್ಯಕೀಯ ಅಭಿಪ್ರಾಯ ಲಭ್ಯವಿರಲಿದೆ. ಮೊಣಕಾಲು ಕೀಲು ಬದಲಿ, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳು ಹಾಗೂ ಇನ್ನಿತರೆ ಕ್ಲಿಷ್ಟಕರ ಸಮಸ್ಯೆಗಳ ಕುರಿತು ನುರಿತ ವೈದ್ಯರಿಂದ ಎರಡನೇ ಅಭಿಪ್ರಾಯ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಸಾರ್ವಜನಿಕರು ಅಥವಾ ರೋಗಿಗಳು ಪರಿಣಿತ ಶಸ್ತ್ರಚಿಕಿತ್ಸಕರೊಂದಿಗೆ ಸಂಪರ್ಕ ಸಾಧಿಸಬಹುದು, ಪ್ರಶ್ನೆಗಳನ್ನು ಕೇಳಬಹುದು. ಚಿಕಿತ್ಸಾ ಯೋಜನೆಗಳ ಕುರಿತು ಎರಡನೇ ಅಭಿಪ್ರಾಯ ಪಡೆಯಬಹುದು.
ಟೋಲ್ ಫ್ರೀ ದೂರವಾಣಿ: ರೋಗಿಗಳು ಟೋಲ್ ಫ್ರೀ ದೂರವಾಣಿ 18004258330 ಸಹಾಯವಾಣಿಗೆ ಕರೆ ಮಾಡಿ ತಜ್ಞ ವೈದ್ಯರ ಸಲಹೆ ಪಡೆಯಬಹುದಾಗಿದೆ. ಸಹಾಯವಾಣಿ ಜೊತೆಗೆ ವಾಟ್ಸ್ಆ್ಯಪ್ ಮೂಲಕವೂ ತಜ್ಞ ವೈದ್ಯರಿಗೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ರೋಗ ನಿರ್ಣಯ ಮತ್ತು ಶಸ್ತ್ರಚಿಕಿತ್ಸೆಯ ಬಗೆಗಿನ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಅವಶ್ಯಕತೆ ಅಥವಾ ಇತರೆ ಯಾವುದೇ ಗೊಂದಲ, ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು. ರೋಗ ಮತ್ತು ಚಿಕಿತ್ಸೆ, ಶಸ್ತ್ರಚಿಕಿತ್ಸಾ ಆಯ್ಕೆಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದು.
ಇದನ್ನೂ ಓದಿ: ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಟ್ರಸ್ಟ್ ವತಿಯಿಂದ 14 ಉಚಿತ ಮನೆಗಳ ಹಸ್ತಾಂತರ
Today, a groundbreaking program has been launched at Arogya Soudha to provide " free second medical opinions" to patients who are anxious or uncertain about complex surgeries.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 19, 2024
it is often necessary for patients to seek a second opinion before undergoing surgery. in some cases,… pic.twitter.com/d8h8cyB1g2
ಕನ್ನಡ, ಆಂಗ್ಲ ಭಾಷೆಗಳಲ್ಲಿ ಮಾರ್ಗದರ್ಶನ: ಯೋಜನೆಯಲ್ಲಿ ಮೊಣಕಾಲು ಮತ್ತು ಸೊಂಟದ (Hip) ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಾಕ್ಷ್ಯ ಆಧರಿತ ಮಾರ್ಗದರ್ಶನ ಒದಗಿಸುವ ಗುರಿ ಹೊಂದಲಾಗಿದೆ. ಲಭ್ಯವಿರುವ ಅತ್ಯುತ್ತಮ ಚಿಕಿತ್ಸಾ ಆಯ್ಕೆಯ ಬಗ್ಗೆ ಪ್ರಬುದ್ಧ ನಿರ್ಧಾರವನ್ನು ತೆಗೆದುಕೊಳ್ಳಲು ರೋಗಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಮಾರ್ಗದರ್ಶನ ದೊರೆಯಲಿದೆ.
''ಶಸ್ತ್ರಚಿಕಿತ್ಸೆಗಳ ಕುರಿತು ಉಚಿತವಾಗಿ ಎರಡನೇ ವೈದ್ಯಕೀಯ ಅಭಿಪ್ರಾಯ ಪಡೆಯಲು ರೋಗಿಗಳು ಟೋಲ್ ಫ್ರೀ ದೂರವಾಣಿ 18004258330 ಸಹಾಯವಾಣಿಗೆ ಕರೆ ಮಾಡಿ ತಜ್ಞ ವೈದ್ಯರ ಸಲಹೆ ಪಡೆಯಬಹುದಾಗಿದೆ. ಸರ್ಜರಿ ಅವಶ್ಯಕತೆ ಇದೆಯೋ, ಇಲ್ಲವೋ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳು ಏನು? ಎಂಬುದರ ಬಗ್ಗೆ ತಜ್ಞ ವೈದ್ಯರ ಸಲಹೆ ಇಲ್ಲಿ ಲಭ್ಯಇರಲಿದೆ. ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ದಿನದ 24/7 ಗಂಟೆ ಅವಧಿಯಲ್ಲಿ ಸಹಾಯವಾಣಿಯು ಕಾರ್ಯ ನಿರ್ವಹಣೆ ಮಾಡಲಿದೆ'' ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ - ಐಸಿಯುಗಳತ್ತ ಚಿತ್ತ: ಸಚಿವ ದಿನೇಶ್ ಗುಂಡೂರಾವ್