ಬೆಂಗಳೂರು : ಹೊಸ ವರ್ಷಾಚರಣೆ ಸಂಧರ್ಭದಲ್ಲಿ ಕರ್ಕಶವಾದ ಶಬ್ಧವನ್ನುಂಟುಮಾಡುವ ಪೀಪಿಗಳ ಬಳಕೆ ಹಾಗೂ ವಿ-ಮಾಸ್ಕ್ ಧರಿಸಬೇಡಿ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಕಡಲೆಕಾಯಿ ಪರಿಷೆ ಸೇರಿದಂತೆ ಇತ್ತೀಚಿನ ಕೆಲ ಕಾರ್ಯಕ್ರಮಗಳಲ್ಲಿ ಕೆಲವರು ಕರ್ಕಶವಾದ ಶಬ್ಧವನ್ನುಂಟು ಮಾಡುವ ಪೀಪಿಗಳನ್ನು ಬಳಸುತ್ತಿರುವುದು ಕಂಡು ಬಂದಿದ್ದು, ಇತರರಿಗೆ ಕಿರಿಕಿರಿಯುಂಟಾಗುತ್ತಿದೆ. ಅದೇ ರೀತಿ, ಭಯಕ್ಕೆ ಕಾರಣವಾಗುವಂತಹ ವಿ-ಮಾಸ್ಕ್ ಬಳಸುತ್ತಿರುವುದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಭಯಗೊಳ್ಳುವ ಸಾಧ್ಯತೆಯಿರುತ್ತದೆ. ಹಾಗೂ ಮಾಸ್ಕ್ ಧರಿಸುವುದರಿಂದ ಮುಖ ಚಹರೆ ಗುರುತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಂಭ್ರಮಾಚರಣೆ ಸಂದರ್ಭದಲ್ಲಿ ಅಂಥವುಗಳನ್ನು ಬಳಸದಿರುವಂತೆ ಮನವಿ ಮಾಡಿದ್ದಾರೆ.
ಇಂದು ರಾತ್ರಿ ನಗರದ ಎಲ್ಲಾ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದು, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ ಒಟ್ಟು 11,830 ಜನ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಸಾರ್ವಜನಿಕವಾಗಿ ಸಂಭ್ರಮಾಚರಣೆಗಳು ನಡೆಯುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.