Yearender 2024: 2024 ರಲ್ಲಿ ಭಾರತದ ಮೇಲೆ ಪ್ರಭಾವ ಬೀರಿದ ಟೆಕ್ ಸ್ಕ್ಯಾಮ್‌ಗಳ ಹೆಚ್ಚಳ ಸೈಬರ್ ಅಪರಾಧದ ವಿಕಸನ ಮತ್ತು ದುರುದ್ದೇಶಪೂರಿತ ಸ್ವರೂಪವನ್ನು ಬಹಿರಂಗಪಡಿಸಿತು. ಕ್ರಿಕೆಟ್ ಐಕಾನ್‌ಗಳ ಹೋಲಿಕೆಯನ್ನು ಬಳಸಿಕೊಳ್ಳುವ ಡೀಪ್‌ಫೇಕ್ ವಿಡಿಯೋಗಳಿಂದ ಹಿಡಿದು ಪ್ರಮುಖ ಬ್ರ್ಯಾಂಡ್‌ಗಳನ್ನು ಗುರಿಯಾಗಿಸುವ ಅತ್ಯಾಧುನಿಕ ransomware ದಾಳಿಗಳವರೆಗೆ, ಡಿಜಿಟಲ್ ಅರೆಸ್ಟ್ ಆತಂಕಕಾರಿ ಹೊಸ ಎತ್ತರವನ್ನು ತಲುಪಿದೆ. ಸೈಬರ್ ಅಪರಾಧಿಗಳು ಹೆಚ್ಚು ಮೋಸಗೊಳಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ. ಜನವರಿ 1 ರಿಂದ ನವೆಂಬರ್ 11 ರವರೆಗೆ ಭಾರತದಲ್ಲಿ 14 ಲಕ್ಷ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2024 ರಲ್ಲಿ ಭಾರತದಲ್ಲಿ ತೆರೆದುಕೊಂಡಿರುವ ಕೆಲವು ಹೆಚ್ಚು ಹೆಡ್‌ಲೈನ್ - ಗ್ರ್ಯಾಬಿಂಗ್ ಟೆಕ್ ಸ್ಕ್ಯಾಮ್‌ಗಳ ವಿವರವಾದ ನೋಟ ಇಲ್ಲಿದೆ.
ಡೀಪ್‌ಫೇಕ್ ವಿಡಿಯೋ ಪ್ರಚಾರ: 2024ರ ಜನವರಿಯಲ್ಲಿ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಡೀಪ್‌ಫೇಕ್ ವಿಡಿಯೋ ಭಾರಿ ಸಂಚಲನನ್ನುಂಟು ಸೃಷ್ಟಿಸಿತ್ತು. ಇದರಿಂದ ಜನರು ಆನ್‌ಲೈನ್‌ನಲ್ಲಿ ವಂಚನೆಗೊಳಗಾದ ಉದಾಹರಣೆಗಳು ಸಹ ಬೆಳಕಿಗೆ ಬಂದವು. ಸಚಿನ್ ಅವರ ಈ ಡೀಪ್‌ಫೇಕ್ ವಿಡಿಯೋದಲ್ಲಿ ಅವರು ಸ್ಕೈವಾರ್ಡ್ ಏವಿಯೇಟರ್ ಕ್ವೆಸ್ಟ್ ಆಟವನ್ನು ಪ್ರಚಾರ ಮಾಡುತ್ತಿರುವಂತೆ ತೋರಿಸಲಾಗಿತ್ತು. ಆದರೆ ಅದು ಸಂಪೂರ್ಣವಾಗಿ ಸುಳ್ಳು. ಈ ವಿಡಿಯೋ ನಕಲಿ ಎಂದು ಸ್ವತಃ ಸಚಿನ್ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮಾಹಿತಿ ನೀಡಿದ್ದರು. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಚಿನ್ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು.
ಅವರಲ್ಲದೇ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ರಶ್ಮಿಕಾ ಮಂಧಾನ ಅವರ ಡೀಪ್ ಡೈವ್ ವಿಡಿಯೋಗಳನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಡೀಪ್‌ಫೇಕ್ ತಂತ್ರಜ್ಞಾನದ ದುರುಪಯೋಗವು ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಮತ್ತು ಇದು ಜನರ ಪ್ರತಿಷ್ಠೆ ಹಾಳುಮಾಡುತ್ತಿದೆ. ಅಷ್ಟೇ ಅಲ್ಲ ಭಾರಿ ಆರ್ಥಿಕ ನಷ್ಟವನ್ನೂ ಉಂಟು ಮಾಡುತ್ತಿದೆ ಎಂದು ಇದರಿಂದ ಅರ್ಥಮಾಡಿಕೊಳ್ಳಬಹುದು.
ನಕಲಿ ಫೆಡೆಕ್ಸ್ ಕೊರಿಯರ್ ಹಗರಣ: ಫೆಬ್ರವರಿ 2024 ರಲ್ಲಿ ಬೆಂಗಳೂರಿನ ಐಟಿ ಕಂಪನಿಯೊಂದರ ಸಿಇಒಗೆ ಮುಂಬೈನಿಂದ ಫೆಡ್ಎಕ್ಸ್ ಕೊರಿಯರ್ ಏಜೆಂಟ್ ಎಂದು ಬಿಂಬಿಸಿ ಕಾಲ್ ಮಾಡಿದ್ದರು. ನಿಮ್ಮ ಹೆಸರಿನಲ್ಲಿ ಅಕ್ರಮ ಪಾರ್ಸೆಲ್ವೊಂದು ಬಂದಿದೆ. ಅದನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದರು. ನಂತರ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದರು. ಇದನ್ನು ನಂಬಿದ ಸಿಇಒ ಎಂಟು ವಹಿವಾಟುಗಳ ಮೂಲಕ ಒಟ್ಟು 2.3 ಕೋಟಿ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು. ಬಳಿಕ ವಂಚನೆಯನ್ನು ಅರಿತ ಸಿಇಒ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಅಪರಾಧಿಗಳು ಎಷ್ಟು ಜಾಣತನದಿಂದ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಾರೆ ಎಂಬುದನ್ನು ಈ ಹಗರಣ ತೋರಿಸುತ್ತದೆ.
ನಕಲಿ ಹೂಡಿಕೆ ಯೋಜನೆ: ಜುಲೈ 2024 ರಲ್ಲಿ ತೆಲಂಗಾಣದ 75 ವರ್ಷದ ನಿವೃತ್ತ ವ್ಯವಸ್ಥಾಪಕರನ್ನು ನಕಲಿ ಹೂಡಿಕೆ ಯೋಜನೆಗೆ ಬಲಿಪಶು ಮಾಡಲಾಯಿತು. ವಾಟ್ಸ್ಆ್ಯಪ್ನಲ್ಲಿ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಅದರಲ್ಲಿ ಭಾರಿ ಆದಾಯ ಗಳಿಸುವ ಭರವಸೆ ನೀಡಲಾಗಿತ್ತು. ಕೆಲವೇ ದಿನಗಳಲ್ಲಿ 4 ಕೋಟಿ ಹೂಡಿಕೆ ಮಾಡಿದ್ದು, ಅವರ ಖಾತೆಯಲ್ಲಿ 10 ಕೋಟಿ ಹಣ ಕಾಣಿಸಿಕೊಂಡಾಗ ಹೆಚ್ಚಿನ ಹಣ ಜಮಾ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ರೀತಿಯ ವಂಚನೆಯಲ್ಲಿ, ಸೈಬರ್ ಅಪರಾಧಿಗಳು ಹೆಚ್ಚಿನ ಆದಾಯದ ಆಮಿಷ ಒಡ್ಡುವ ಮೂಲಕ ಜನರನ್ನು ವಂಚಿಸುತ್ತಾರೆ ಮತ್ತು ಅವರಿಗೆ ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಾರೆ ಎಂಬುದು ಅರ್ಥಮಾಡಿಕೊಳ್ಳಬೇಕು.
ಸೈಬರ್ ಬ್ಲ್ಯಾಕ್‌ಮೇಲ್: ಆಗಸ್ಟ್ 2024 ರಲ್ಲಿ ಪುಣೆಯ 74 ವರ್ಷದ ವ್ಯಕ್ತಿಯೊಬ್ಬರು ಸೈಬರ್ ಬ್ಲ್ಯಾಕ್‌ಮೇಲ್‌ಗೆ ಬಲಿಯಾದರು. ಸೈಬರ್ ಕ್ರಿಮಿನಲ್‌ಗಳು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಅವರಿಗೆ ಹಲವು ಬಾರಿ ಕರೆ ಮಾಡಿ ಬ್ಯಾಂಕ್‌ಗೆ ತೆರಳಿ 97 ಲಕ್ಷ ರೂ. ಹಣ ವರ್ಗಾಯಿಸುವಂತೆ ಒತ್ತಾಯಿಸಿದರು. ಈ ಸೈಬರ್ ಕ್ರೈಂ ಎಸಗಿದ ವಂಚಕರು ಸಂತ್ರಸ್ತನಿಗೆ ಹಣ ಕೊಡದಿದ್ದರೆ ಕಾನೂನು ಕ್ರಮದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು. ಈ ರೀತಿಯ ವಂಚನೆಯು ಸೈಬರ್ ಬ್ಲ್ಯಾಕ್‌ಮೇಲ್‌ಗೆ ಬಲಿಯಾದವರ ಮೇಲೆ ಎಷ್ಟು ಮಾನಸಿಕ ಮತ್ತು ಆರ್ಥಿಕ ಒತ್ತಡವನ್ನು ಬೀರುತ್ತದೆ ಎಂಬುದನ್ನು ತೋರಿಸುತ್ತದೆ.
ಫೇಕ್ ಟ್ರೇಡಿಂಗ್ ಆ್ಯಪ್: ಆಗಸ್ಟ್ 2024 ರಲ್ಲಿ ಮುಂಬೈನ 75 ವರ್ಷದ ನಿವೃತ್ತ ಹಡಗು ಕ್ಯಾಪ್ಟನ್ ಫೇಕ್ ಟ್ರೇಡಿಂಗ್ ಆ್ಯಪ್ ಮೂಲಕ 11.16 ಕೋಟಿ ರೂಪಾಯಿಗಳ ಕಳೆದುಕೊಂಡರು. ಈ ಹಗರಣವು ವಾಟ್ಸಾಪ್ ಗುಂಪಿನಿಂದ ಪ್ರಾರಂಭವಾಯಿತು. ಅದರಲ್ಲಿ ಅವರು ಹೂಡಿಕೆ ಮಾಡಲು ಆಕರ್ಷಿತರಾಗಿದ್ದರು. ನಂತರ ಅವರ ಪ್ರಯೋಜನಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಠೇವಣಿ ಮಾಡಲು ಅವರನ್ನು ಕೇಳಲಾಯಿತು. ಆದರೆ ಶಿಪ್ ಕ್ಯಾಪ್ಟನ್ ತನ್ನ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಅದು ಸಾಧ್ಯವಾಗಲಿಲ್ಲ. ಈ ಒಂದು ಘಟನೆ ನಮ್ಮಲ್ಲೆರಿಗೂ ಎಚ್ಚರಿಂದ ವ್ಯವಹರಿಸಲು ಸೂಚಿಸುತ್ತದೆ.
2024 ರ ಅತಿದೊಡ್ಡ ತಂತ್ರಜ್ಞಾನ ಮತ್ತು ಸೈಬರ್ ಹಗರಣಗಳು..
ಸುಳ್ಳು ಸುಪ್ರೀಂ ಕೋರ್ಟ್ ವಿಚಾರಣೆ: ಆಗಸ್ಟ್ 2024 ರಲ್ಲಿ ವರ್ಧಮಾನ್ ಗ್ರೂಪ್ ಅಧ್ಯಕ್ಷ ಎಸ್.ಪಿ.ಓಸ್ವಾಲ್ ಕೂಡ ವಂಚನೆಗೆ ಬಲಿಯಾದರು. ವಂಚಕರು ಅವರನ್ನು ಫೇಕ್ ಆನ್‌ಲೈನ್ ನ್ಯಾಯಾಲಯದ ವಿಚಾರಣೆಗೆ ಆಮಿಷವೊಡ್ಡಿ ತನಿಖೆಯ ಭಾಗವಾಗಿ ಅವರ ಹಣವನ್ನು ನಮ್ಮ ಖಾತೆಗೆ ವರ್ಗಾಯಿಸುವಂತೆ ಕೇಳಿಕೊಂಡರು. ಭಯದಿಂದಾಗಿ ಓಸ್ವಾಲ್ ತನ್ನ ಸಂಪೂರ್ಣ ಹಣವನ್ನು ವಂಚಕರಿಗೆ ವರ್ಗಾಯಿಸಿದನು. ದೂರಿನ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ 5.2 ಕೋಟಿ ರೂ. ಹಣವನ್ನು ವಸೂಲಿ ಮಾಡಿದರು.
ಡಿಜಿಟಲ್ ಅರೆಸ್ಟ್: ನವೆಂಬರ್‌ನಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 11.8 ಕೋಟಿ ರೂ. ಕಳೆದುಕೊಂಡಿದ್ದರು. ಆಧಾರ್ ಸಂಖ್ಯೆ ಮತ್ತು ಸಿಮ್ ಕಾರ್ಡ್ ದುರ್ಬಳಕೆಯಾಗುತ್ತಿದೆ ಎಂದು ಸೈಬರ್ ಕ್ರಿಮಿನಲ್‌ಗಳು ನಂಬಿಸಿದ್ದು, ಸಹಕರಿಸದಿದ್ದರೆ ಬಂಧಿಸುವುದಾಗಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ನ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ಅಪರಾಧಿಗಳು ಪೊಲೀಸ್, ಸಿಐಡಿ, ಇಡಿ, ನ್ಯಾಯಾಧೀಶರಂತಹ ದೊಡ್ಡ ಹುದ್ದೆಗಳ ಹೆಸರಿನಲ್ಲಿ ಕರೆ ಮಾಡಿ ಜನರನ್ನು ಹೆದರಿಸಿ ನಂತರ ವಂಚಿಸುತ್ತಿರುವುದು ಕಂಡುಬಂದಿದೆ. ಈ ರೀತಿಯ ವಂಚನೆಗಳು ಸೈಬರ್ ಅಪರಾಧಿಗಳು ಜನರನ್ನು ಹೇಗೆ ಹೆದರಿಸುತ್ತಾರೆ ಮತ್ತು ಅವರ ಹಣವನ್ನು ಲೂಟಿ ಮಾಡುತ್ತಾರೆ ಎಂಬುದನ್ನು ತೋರಿಸುತ್ತಾರೆ.
ಸೈಬರ್ ವಂಚನೆ ತಪ್ಪಿಸಲು ಸಲಹೆಗಳು:
ಗುರುತು ಪರಿಶೀಲಿಸಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ಕರೆಗಳು ಅಥವಾ ಸಂದೇಶಗಳೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ದಯವಿಟ್ಟು ಯಾವುದೇ ಕೊರಿಯರ್ ಅಥವಾ ಕಾನೂನು ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿ ಮತ್ತು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ದೃಢೀಕರಿಸಿ.
ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ಜಾಗರೂಕರಾಗಿರಿ: ಸೆಲೆಬ್ರಿಟಿಗಳನ್ನು ಒಳಗೊಂಡಿರುವ ವಿಡಿಯೋ ಮತ್ತು ಆಡಿಯೊ ಕ್ಲಿಪ್‌ಗಳನ್ನು ನಂಬಬೇಡಿ ಮತ್ತು ಪರಿಶೀಲಿಸದೇ ಯಾರೊಂದಿಗೂ ಶೇರ್ ಮಾಡಬೇಡಿ.
ನಕಲಿ ಇನ್ವೆಸ್ಟ್ಮೆಂಟ್ ಪ್ಲಾನ್ ಬಗ್ಗೆ ಇರಲಿ ಎಚ್ಚರ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಅನೇಕ ರೀತಿಯ ಫೇಕ್ ಟ್ರೇಡಿಂಗ್ ಆ್ಯಪ್ ಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಜನರು ಅದನ್ನು ಸರಿಯಾಗಿ ಪರಿಶೀಲಿಸಬೇಕು.
ಸೈಬರ್ ಬ್ಲ್ಯಾಕ್‌ಮೇಲ್ ತಪ್ಪಿಸಿ: ಯಾರಾದರೂ ನಿಮಗೆ ಕರೆ ಅಥವಾ ಸಂದೇಶದ ಮೂಲಕ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕುತ್ತಿದ್ದರೆ ಮತ್ತು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದರೆ, ಆದಷ್ಟು ಬೇಗ ಪೊಲೀಸರಿಗೆ ವರದಿ ಮಾಡಿ.
ಟ್ರೇಡಿಂಗ್ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ: ನೀವು ಯಾವುದೇ ಪ್ಲಾಟ್‌ಫಾರ್ಮ್‌ಗಳ ಮೂಲಕ ವ್ಯಾಪಾರ ಮಾಡಲು ಬಯಸಿದರೆ, ನೀವು ಒಂದು ರೂಪಾಯಿಯನ್ನು ಹೂಡಿಕೆ ಮಾಡುವ ಮೊದಲು ಪ್ಲಾಟ್‌ಫಾರ್ಮ್ ಅನ್ನು ಪರಿಶೀಲಿಸಬೇಕು ಮತ್ತು ಯಾವಾಗಲೂ ಪ್ರಮಾಣೀಕೃತ ಪ್ಲಾಟ್‌ಫಾರ್ಮ್ ಅನ್ನು ಮಾತ್ರ ಬಳಸಬೇಕು.
ಓದಿ: 2024ರ ವಿಶಿಷ್ಟ ತಾಂತ್ರಿಕ ಉತ್ಪನ್ನಗಳಿವು: ಇವುಗಳ ಫೀಚರ್ಗಳು ಅದ್ಭುತವೋ ಅದ್ಭುತ!