ಬೆಂಗಳೂರು: ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಅಪವಾದ ಎಂಬಂತೆ ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಕ್ರೈಂ ಸಂಖ್ಯೆ ಕಡಿಮೆಯಾಗಿವೆ. ಸರ್ವೆಂಟ್ ಥೆಫ್ಟ್ ಹೊರತುಪಡಿಸಿ ಕೊಲೆ, ಕೊಲೆಯತ್ನ, ಕಳ್ಳತನ, ರಾಬರಿ ಸೇರಿ ವಿವಿಧ ಅಪರಾಧಗಳ ಸಂಖ್ಯೆಯಲ್ಲಿ ಇಳಿಕೆಯಾಗಿವೆ.
ಹಳೆ ಪ್ರಕರಣಗಳಲ್ಲಿ ಆರೋಪಿಗಳ ಬಂಧನ, ಇ - ಬೀಟ್ ಹೆಚ್ಚಳ, ಸಿಸಿಟಿವಿ ಸೇರಿದಂತೆ ತಂತ್ರಜ್ಞಾನ ಸದ್ಬಳಕೆ ಹಾಗೂ ರೌಡಿಗಳ ಮೇಲೆ ನಿಗಾ ಹಾಗೂ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಿದ ಪರಿಣಾಮ ನಗರದಲ್ಲಿ ಅಪರಾಧ ಕಡಿಮೆಯಾಗಲು ಪ್ರಮುಖ ಕಾರಣವಾಗಿವೆ. 2023 ರಲ್ಲಿ ಹಗಲು ಮನೆಗಳ್ಳತನ ಪ್ರಕರಣಗಳ ಸಂಖ್ಯೆ 264 ರಷ್ಟಿತ್ತು. ಸರಾಸರಿ ಪ್ರತಿ ತಿಂಗಳು 22 ಮನೆಗಳ್ಳತನದ ಪ್ರಕರಣಗಳು ವರದಿಯಾದರೆ ಈ ವರ್ಷ 11 ತಿಂಗಳಲ್ಲಿ 171ರಷ್ಟಿದ್ದು, ಸರಾಸರಿ 15ಕ್ಕೆ ಕುಸಿದಿದೆ.
ಅದೇ ರೀತಿ ಕಳೆದ ವರ್ಷ 206 ಕೊಲೆಯಾದರೆ ಈ ಬಾರಿ 176 ಹತ್ಯೆಯಾಗಿವೆ. 2023ರಲ್ಲಿ 537 ಕೊಲೆಯತ್ನ ಪ್ರಕರಣ ದಾಖಲಾಗಿದ್ದರೆ ಈ ವರ್ಷ 450ಕ್ಕೆ ಇಳಿಕೆಯಾಗಿದೆ. ಸೇವಕನಿಂದ ಕಳವು ಪ್ರಕರಣಗಳು ಶೇ.20ರಷ್ಟು ಅಧಿಕವಾಗಿವೆ ಎಂದು ಪೊಲೀಸ್ ಇಲಾಖೆಯ ಅಂಕಿ - ಅಂಶಗಳು ಸ್ಪಷ್ಟಪಡಿಸಿವೆ.
ಮನೆಗಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ: ರಾಜಧಾನಿ ಪೊಲೀಸರು ಕೈಗೊಂಡ ಕ್ರಮಗಳಿಂದ ಕಳ್ಳತನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ. ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಲು ಹೆಚ್ಚಾಗಿ ಪೇಯಿಂಗ್ ಗೆಸ್ಟ್ (ಪಿ.ಜಿ.) ಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಖದೀಮರನ್ನು ಪೊಲೀಸರು ಹಡೆಮುರಿಕಟ್ಟಿದ್ದಾರೆ. ಅಲ್ಲದೇ ಮಾಲೀಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದರು. ಸಿಸಿಟಿವಿ, ಭದ್ರತಾ ಸಿಬ್ಬಂದಿ, ಪಿ.ಜಿ.ಯಲ್ಲಿರುವವರು ಸೂಕ್ತ ವಿವರವನ್ನು ಸಾಫ್ಟ್ವೇರ್ನಲ್ಲಿ ನಮೂದು ಸೇರಿ ಹಲವು ಅಂಶಗಳನ್ನು ಮಾರ್ಗಸೂಚಿಯಲ್ಲಿ ಹೇಳಲಾಗಿತ್ತು.
ಅಲ್ಲದೇ ಹೆಚ್ಚು ಅಪರಾಧ ಪ್ರಕರಣ ನಡೆಯುವ ಬ್ಲಾಕ್ ಸ್ಟಾಟ್ಗಳಲ್ಲಿ ಇ-ಬೀಟ್ ಸಂಖ್ಯೆಯಲ್ಲಿ ಹೆಚ್ಚಳ, ಹೊಯ್ಸಳ ಗಸ್ತು ತಿರುಗುವುದು, ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ (MCCTNS) ಪೋರ್ಟಬಲ್ ಸ್ಕ್ಯಾನರ್ ಬಳಕೆ ಪರಿಣಾಮ ಕಳ್ಳತನ ಕಡಿಮೆಯಾಗಲು ಕಾರಣವಾಯಿತು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.
ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಅಗತ್ಯ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ, ಕದ್ದ ಮೊಬೈಲ್ಗಳನ್ನು ಮರು ಬಳಸದಂತೆ ತಡೆಯಲು ಹಾಗೂ ಸಿಇಐಆರ್ ಪೋರ್ಟಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಕಳೆದುಕೊಂಡವರು ದೂರು ನೀಡಿದ ಪರಿಣಾಮ ಮೊಬೈಲ್ ಬ್ಲಾಕ್ ಮಾಡಲಾಗುತ್ತದೆ. ಅಲ್ಲದೇ, ಮೊಬೈಲ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಇದರಿಂದ ಖದೀಮರು ಬಂಧನ ಆತಂಕದಲ್ಲಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗುವುದು ಕಡಿಮೆಯಾಗಿದೆ ಎಂದು ಪೊಲಿಸ್ ಇನ್ಸ್ಪೆಕ್ಟರ್ವೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಲೆ, ರಾಬರಿ ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆ: ಹತ್ಯೆ, ರಾಬರಿ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿವೆ. ರೌಡಿಗಳ ಮೇಲೆ ಹದ್ದಿನ ಕಣ್ಣು, ಪದೇ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಗೈರಾಗಿದ್ದ ಹಳೆಯ ಪ್ರಕರಣಗಳು ಹೆಚ್ಚು ಒತ್ತು ನೀಡಿದ ಪರಿಣಾಮ ಈ ವರ್ಷ ಕ್ರೈಂ ಕಡಿಮೆಯಾಗಲು ಕಾರಣವಾಗಿದೆ.
ಕಳ್ಳತನ ಕಡಿಮೆಯಾಗಲು ಪ್ರಮುಖ ಕಾರಣಗಳಿವು:
- ಪಿಜಿಗಳಿಗೆ ಮಾರ್ಗಸೂಚಿ ಕಡ್ಡಾಯ ಅನುಷ್ಠಾನ
- MCCTNS ವ್ಯಾಪಕ ಬಳಕೆಯಿಂದ ಸಿಕ್ಕಿಬಿದ್ದ ಖದೀಮರು
- ಸಿಐಇಆರ್ ನಿಂದಾಗಿ ಕದ್ದ ಮೊಬೈಲ್ ಮಾರಾಟಕ್ಕೆ ಅಡ್ಡಿ
- ಇ- ಬೀಟ್ ಹಾಗೂ ಹೊಯ್ಸಳ ಹೆಚ್ಚಳ
- ಸಾರ್ವಜನಿಕ ಹಾಗೂ ಅಗತ್ಯ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಒತ್ತು
ಕಳೆದ ಎರಡು ವರ್ಷಗಳಲ್ಲಿ ದಾಖಲಾದ ವಿವಿಧ ಅಪರಾಧ ಪ್ರಕರಣಗಳ ಸಂಕ್ಷಿಪ್ತ ಪಟ್ಟಿ
ಪ್ರಕರಣಗಳು | 2023 | 2024 |
ಕೊಲೆ | 206 | 176 |
ಕೊಲೆಯತ್ನ | 537 | 450 |
ಕಳ್ಳತನ (ಹಗಲು) | 264 | 171 (ನ.31 ಅಂತ್ಯಕ್ಕೆ) |
ರಾತ್ರಿಗಳ್ಳತನ | 878 | 708 |
ಸೇವಕನಿಂದ ಕಳ್ಳತನ | 320 | 352 |
ಅಪಹರಣ | 1,151 | 1,137 |
ಅತ್ಯಾಚಾರ | 172 | 165 |
ಇದನ್ನೂ ಓದಿ: ಇಂದು ಸಂಜೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ: ಈ ಜಿಲ್ಲೆಗಳ ಪ್ರವಾಸಿ ತಾಣಗಳಿಗೂ ನೋ ಎಂಟ್ರಿ