ಜೈಪುರ: ರಾಷ್ಟ್ರ ರಾಜಧಾನಿ ದೆಹಲಿ ಮಾತ್ರವಲ್ಲದೆ ಇದೀಗ ರಾಜಸ್ಥಾನದ ಕೆಲ ಜಿಲ್ಲೆಗಳಲ್ಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ ಮಿತಿ ಮೀರಿದ್ದರಿಂದ ರಾಜಸ್ಥಾನದ ಖೈರ್ಥಾಲ್-ತಿಜಾರಾ ಜಿಲ್ಲೆಯಲ್ಲಿ ಬುಧವಾರದಿಂದ ನವೆಂಬರ್ 23ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. 1ರಿಂದ 5ನೇ ತರಗತಿಯ ಸರ್ಕಾರಿ ಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನ ಕುಸಿದಿದ್ದು, ಶೀತ ವಾತಾವರಣ ಹರಡಿದೆ. ಅಲ್ಲದೆ ಈಗ ಹಲವಾರು ನಗರಗಳಲ್ಲಿ ಮಾಲಿನ್ಯವು ಅಪಾಯದ ಮಟ್ಟವನ್ನು ದಾಟಿದ್ದರಿಂದ ಖೈರ್ಥಾಲ್ ಕಲೆಕ್ಟರ್ ಕಿಶೋರ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಭಿವಾಡಿ (ಖೈರ್ಥಾಲ್)ನಲ್ಲಿ ಗಾಳಿಯ ಗುಣಮಟ್ಟವು 380ರಷ್ಟು ಎಕ್ಯೂಐ ದಾಖಲಾಗಿದ್ದು, ಕರೌಲಿ ಮತ್ತು ಬಿಕಾನೇರ್ ನಲ್ಲಿಯೂ ಗಾಳಿಯ ಗುಣಮಟ್ಟ ಅಪಾಯಕಾರಿಯಾಗಿದೆ.
ಎಕ್ಯೂಐ 200ಕ್ಕಿಂತ ಹೆಚ್ಚು: ಇನ್ನು ಸಿಕಾರ್, ಜುಂಜುನು, ಗಂಗಾನಗರ, ಟೋಂಕ್, ಬನ್ಸ್ ವಾರಾ, ದೌಸಾ, ಸವಾಯಿ ಮಾಧೋಪುರ್, ಕೋಟಾ, ಪ್ರತಾಪ್ ಗಢ ಮತ್ತು ಇತ್ಯಾದಿಗಳಲ್ಲಿ ಎಕ್ಯೂಐ 200ಕ್ಕಿಂತ ಹೆಚ್ಚಾಗಿದೆ. ರಾಜಸ್ಥಾನದ ಒಟ್ಟು 26 ಜಿಲ್ಲೆಗಳಲ್ಲಿ ಎಕ್ಯೂಐ 200ಕ್ಕಿಂತ ಹೆಚ್ಚಾಗಿದೆ. ಸಿರೋಹಿ, ರಾಜ್ ಸಮಂದ್, ಬಾರ್ಮರ್ ಮತ್ತು ಅಜ್ಮೀರ್ ಸೇರಿದಂತೆ ದಕ್ಷಿಣ ರಾಜಸ್ಥಾನದಲ್ಲಿ ಸ್ವಚ್ಛ ಗಾಳಿ ದಾಖಲಾಗಿದೆ.
ನವೆಂಬರ್ 18ರಂದೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯು ಖೈರ್ಥಾಲ್-ತಿಜಾರಾ ಜಿಲ್ಲೆಯಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್ಎಪಿ) ನಾಲ್ಕನೇ ಹಂತವನ್ನು ಜಾರಿಗೆ ತಂದಿದೆ. ನಗರದಲ್ಲಿ ಧೂಳು ನಿಯಂತ್ರಣಕ್ಕಾಗಿ ನೀರು ಸಿಂಪಡಿಸುವುದು ಮತ್ತು ಸ್ಮಾಗ್ ಗನ್‌ಗಳನ್ನು ಬಳಸಲಾಗುತ್ತಿದೆ.
ಹೊಗೆ ತುಂಬಿದ ಆಗಸ: ಭಿವಾಡಿ ನಗರದಲ್ಲಿನ ಮಾಲಿನ್ಯದಿಂದಾಗಿ, ಆಕಾಶವು ದಿನವಿಡೀ ಹೊಗೆಯಿಂದ ಆವೃತವಾಗಿತ್ತು ಮತ್ತು ಗೋಚರತೆ ಕಡಿಮೆಯಾಗಿತ್ತು. ಜನ ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಉಸಿರಾಟದ ತೊಂದರೆಯನ್ನು ಎದುರಿಸಿದರು.
ದೆಹಲಿ ಮಾಲಿನ್ಯದ ಕಾರಣ ಪತ್ತೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ವಾಯುಮಾಲಿನ್ಯಕ್ಕೆ ಉಷ್ಣ ವಿದ್ಯುತ್ ಸ್ಥಾವರಗಳೇ ಪ್ರಮುಖ ಕಾರಣ ಎಂದು ಅಧ್ಯಯನವೊಂದು ಹೇಳಿದೆ. ದೆಹಲಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಬೆಳೆ ಸುಡುವುದಕ್ಕಿಂತಲೂ 16 ಪಟ್ಟು ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (ಸಿಆರ್‌ಇಎ) ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: ಎ ಆರ್ ರೆಹಮಾನ್ ಜೊತೆಗಿನ ಸಂಬಂಧ ಕಡಿದುಕೊಂಡ ಸೈರಾ ಬಾನು: 29 ವರ್ಷಗಳ ದಾಂಪತ್ಯ ಅಂತ್ಯ