ಚೆನ್ನೈ, ತಮಿಳುನಾಡು: 68 ಜನರ ಸಾವಿಗೆ ಕಾರಣವಾದ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ಬಗ್ಗೆ ಸಿಬಿಐ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಜೂನ್ 18 ರಂದು ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಈ ದುರಂತ ಘಟನೆ ನಡೆದಿತ್ತು. ನ್ಯಾಯಮೂರ್ತಿಗಳಾದ ಡಿ. ಕೃಷ್ಣಕುಮಾರ್ ಮತ್ತು ಪಿ.ಬಿ. ಬಾಲಾಜಿ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಬುಧವಾರ ಪ್ರಕರಣವನ್ನು ಕೇಂದ್ರ ಸಂಸ್ಥೆಗೆ ವರ್ಗಾಯಿಸುವಂತೆ ಅಪರಾಧ ವಿಭಾಗ-ಅಪರಾಧ ತನಿಖಾ ಇಲಾಖೆಗೆ (ಸಿಬಿ-ಸಿಐಡಿ) ನಿರ್ದೇಶನ ನೀಡಿತು.
ಐ.ಎಸ್. ಇನ್ಬದುರೈ (ಎಐಎಡಿಎಂಕೆ), ಕೆ. ಬಾಲು (ಪಿಎಂಕೆ), ಬಿ. ಪಾರ್ಥಸಾರಥಿ (ಡಿಎಂಡಿಕೆ) ಮತ್ತು ಎ. ಮೋಹನ್ ದಾಸ್ (ಬಿಜೆಪಿ) ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ತಮಿಳುನಾಡಿನಲ್ಲಿ ಮೇಲಿಂದ ಮೇಲೆ ಕಳ್ಳಭಟ್ಟಿ ದುರಂತಗಳು ಸಂಭವಿಸುತ್ತಿವೆ ಮತ್ತು ಹಿಂದಿನ ಪ್ರಕರಣಗಳಲ್ಲಿ ಸಿಬಿ-ಸಿಐಡಿ ತನಿಖೆಗಳಿಂದ ಇಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರು ವಾದಿಸಿದರು.
ಕಲ್ಲಕುರಿಚಿ ಘಟನೆಯಲ್ಲಿ 60 ಕ್ಕೂ ಹೆಚ್ಚು ಜೀವಗಳು ಬಲಿಯಾಗಿರುವುದರಿಂದ, ಈ ಪ್ರಕರಣವು ವಿವರವಾದ ಸಿಬಿಐ ತನಿಖೆಗೆ ಸೂಕ್ತವಾಗಿದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಕಲ್ಲಕುರಿಚಿ ಕಳ್ಳಭಟ್ಟಿ ದುರಂತವು ಮದ್ಯಪಾನದ ಹಾನಿಕಾರಕ ಪರಿಣಾಮಗಳ ಬಗ್ಗೆ ಸಮಾಜಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಬೇಕು ಎಂದು ನ್ಯಾಯಮೂರ್ತಿ ಬಾಲಾಜಿ ಅಭಿಪ್ರಾಯಪಟ್ಟರು. ಕಳ್ಳಭಟ್ಟಿ ಮಾರಾಟ ತಡೆಗಟ್ಟಲು ವಿಫಲವಾದ ಪೊಲೀಸ್ ಇಲಾಖೆಯನ್ನು ನ್ಯಾಯಾಲಯ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿತು. ಮಿಥೆನಾಲ್ ಮಿಶ್ರಿತ ಕಳ್ಳಭಟ್ಟಿ ಮಾರಾಟ ನಡೆದಿರುವುದು ತಿಳಿದಿದ್ದರೂ ಪೊಲೀಸರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರು ಎಂದು ನ್ಯಾಯಪೀಠ ಹೇಳಿತು. ಈ ಎಲ್ಲ ಕಾರಣಗಳಿಗಾಗಿ ಸಮಗ್ರ ತನಿಖೆ ನಡೆಸಲು ತನಿಖೆಯನ್ನು ಸಿಬಿ-ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತು.
ಹೆಚ್ಚಾಗಿ ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದ ಕರುಣಪುರಂನ ದಿನಗೂಲಿ ಕಾರ್ಮಿಕರು, ಜೂನ್ 18 ರಂದು ಸ್ಥಳೀಯ ಕಳ್ಳಸಾಗಣೆದಾರ ಗೋವಿಂದರಾಜ್ ಅಲಿಯಾಸ್ ಕಣ್ಣುಕುಟ್ಟಿ ಎಂಬಾತನಿಂದ ಖರೀದಿಸಿದ ಮಿಥೆನಾಲ್ ಮಿಶ್ರಿತ ಮದ್ಯ ಸೇವಿಸಿದ ನಂತರ 68 ಜನ ಸಾವಿಗೀಡಾಗಿದ್ದರು. ಜುಲೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದರು. ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಅವರು ಭರವಸೆ ನೀಡಿದ್ದರು. ಇದಲ್ಲದೆ, ಘಟನೆಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಖಾತೆಗಳಿಗೆ 5 ಲಕ್ಷ ರೂ. ಠೇವಣಿ ಮಾಡಲಾಗಿದೆ.
ಇದನ್ನೂ ಓದಿ : ಆಪಲ್ ಸ್ಟೋರ್ನಲ್ಲಿ 6.4 ಮಿಲಿಯನ್ ರೇಟಿಂಗ್ ಪಡೆದ ಫೋನ್ ಪೇ: ಯೂಟ್ಯೂಬ್, ಇನ್ಸ್ಟಾ ಹಿಂದಿಕ್ಕಿದ ಕಂಪನಿ