ಕರ್ನಾಟಕ

karnataka

ETV Bharat / bharat

ಜಾಮೀನು ನೀಡುವಾಗ ಗೂಗಲ್​ ಲೊಕೇಶನ್ ಶೇರ್ ಮಾಡುವ ಷರತ್ತು ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ - Bail Conditions - BAIL CONDITIONS

ಆರೋಪಿಯೊಬ್ಬನಿಗೆ ಜಾಮೀನು ನೀಡುವಾಗ ಆತನಿಗೆ ಗೂಗಲ್ ಲೊಕೇಶನ್ ಶೇರ್ ಮಾಡುವಂತೆ ಷರತ್ತು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By PTI

Published : Jul 8, 2024, 1:05 PM IST

ನವದೆಹಲಿ: ಕ್ರಿಮಿನಲ್ ಪ್ರಕರಣದ ಆರೋಪಿಗೆ ಜಾಮೀನು ನೀಡುವಾಗ, ಪೊಲೀಸರು ಆತನ ಖಾಸಗಿ ಜೀವನದಲ್ಲಿ ಇಣುಕಿ ನೋಡುವ ಅವಕಾಶದ ಷರತ್ತು ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಡ್ರಗ್ಸ್​ ಪ್ರಕರಣವೊಂದರಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನೀಡುವಾಗ, ಆತ ತನ್ನ ಮೊಬೈಲ್​ ಫೋನ್​ನಲ್ಲಿ ಗೂಗಲ್ ಮ್ಯಾಪ್ ಪಿನ್ ಮಾಡಿ ಅದನ್ನು ಪೊಲೀಸ್ ತನಿಖಾಧಿಕಾರಿಯೊಂದಿಗೆ ಶೇರ್ ಮಾಡಿಕೊಳ್ಳಬೇಕೆಂದು ದೆಹಲಿ ಹೈಕೋರ್ಟ್​ ಷರತ್ತು ವಿಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಸುಪ್ರೀಂ ಕೋರ್ಟ್​ ನ್ಯಾಯಪೀಠವು ದೆಹಲಿ ಹೈಕೋರ್ಟ್​ ವಿಧಿಸಿದ್ದ ಜಾಮೀನು ಷರತ್ತನ್ನು ರದ್ದುಗೊಳಿಸಿದೆ.

"ಜಾಮೀನಿನ ಉದ್ದೇಶವನ್ನೇ ಹಾಳು ಮಾಡುವ ಜಾಮೀನು ಷರತ್ತು ವಿಧಿಸಲು ಸಾಧ್ಯವಿಲ್ಲ. ಗೂಗಲ್ ಪಿನ್ ಜಾಮೀನು ಷರತ್ತು ಆಗಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ. ಆರೋಪಿಗಳ ಚಲನವಲನಗಳನ್ನು ನಿರಂತರವಾಗಿ ಪತ್ತೆ ಹಚ್ಚಲು ಪೊಲೀಸರಿಗೆ ಅನುವು ಮಾಡಿಕೊಡುವ ಜಾಮೀನು ಷರತ್ತು ಇರಲು ಸಾಧ್ಯವಿಲ್ಲ. ಜಾಮೀನಿನ ಮೇಲೆ ಆರೋಪಿಯ ಖಾಸಗಿ ಜೀವನವನ್ನು ಇಣುಕಿ ನೋಡಲು ಪೊಲೀಸರಿಗೆ ಅವಕಾಶ ನೀಡಲಾಗಲ್ಲ" ಎಂದು ನ್ಯಾಯಮೂರ್ತಿ ಓಕಾ ತೀರ್ಪನ್ನು ಪ್ರಕಟಿಸಿದರು.

ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಷರತ್ತು ಪ್ರಶ್ನಿಸಿ ನೈಜೀರಿಯಾ ಪ್ರಜೆ ಫ್ರಾಂಕ್ ವಿಟಸ್ ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಜಾಮೀನಿನ ಮೇಲೆ ಹೊರಗಿರುವಾಗ ತನಿಖಾಧಿಕಾರಿಗಳು ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ಅನುವು ಮಾಡಿಕೊಡಲು ಆತನ ಮೊಬೈಲ್ ಫೋನ್​ನಿಂದ ಗೂಗಲ್ ಪಿನ್ ಶೇರ್ ಮಾಡುವಂತೆ ದೆಹಲಿ ಹೈಕೋರ್ಟ್ ವಿಧಿಸಿದ ಷರತ್ತು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆ ಏಪ್ರಿಲ್ 29ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಈ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಆಗಸ್ಟ್ 24, 2017ರಂದು ಮಹತ್ವದ ತೀರ್ಪು ನೀಡಿದ್ದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು, ಖಾಸಗಿತನದ ಹಕ್ಕು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಸರ್ವಾನುಮತದಿಂದ ಘೋಷಿಸಿತು. ಗೂಗಲ್ ಲೋಕೇಶನ್ ಶೇರ್ ಮಾಡುವ ಷರತ್ತು ಮೇಲ್ನೋಟಕ್ಕೆ ಜಾಮೀನಿನ ಮೇಲೆ ಹೊರಗೆ ಬರುವ ಆರೋಪಿಗಳ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಗ ಸುಪ್ರೀಂ ಕೋರ್ಟ್​ ಅಭಿಪ್ರಾಯ ಪಟ್ಟಿತ್ತು. ಗೂಗಲ್ ಪಿನ್ ಹಂಚಿಕೊಳ್ಳುವ ಇದೇ ರೀತಿಯ ಜಾಮೀನು ಷರತ್ತುಗಳನ್ನು ಹೈಕೋರ್ಟ್ ವಿವಿಧ ಪ್ರಕರಣಗಳಲ್ಲಿ ಇನ್ನೂ ಕೆಲ ಆರೋಪಿಗಳಿಗೆ ಕೂಡ ವಿಧಿಸಿದೆ. ಈ ಆರೋಪಿಗಳ ವಿಷಯದಲ್ಲಿಯೂ ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಜುಲೈನಲ್ಲಿ ಭರವಸೆ ಮೂಡಿಸಿದ ಮುಂಗಾರು: ದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಬಿತ್ತನೆ - July Monsoon

ABOUT THE AUTHOR

...view details