ಕಲಬುರಗಿ : ಡ್ರಗ್ ಸ್ಮಗ್ಲರ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಗರದ ತಾವರಗೇರ ಕ್ರಾಸ್ ಬಳಿ ನಡೆದಿದೆ. ಆರೋಪಿ ಸುಪ್ರೀತ್ ನವಲೇ (32) ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಕ್ರಮವಾಗಿ ಕಾರಿನಲ್ಲಿ ಮಾದಕ ವಸ್ತುಗಳನ್ನ ಸಾಗಣೆ ಮಾಡ್ತಿದ್ದ ಸುಪ್ರೀತ್ ಕಾರು ತಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಆರೋಪಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಆಗ ಚೌಕ್ ಪೊಲೀಸ್ ಠಾಣೆ ಪಿಐ ರಾಘವೇಂದ್ರ ಅವರು ಆತ್ಮ ರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗುರುಮೂರ್ತಿ ಎಂಬುವವರಿಗೆ ಗಾಯವಾಗಿದೆ. ಇದೀಗ ಗಾಯಾಳು ಕಾನ್ಸ್ಟೇಬಲ್ ಹಾಗೂ ಆರೋಪಿ ಸುಪ್ರಿತ್ನನ್ನು ನಗರದ ಜಿಮ್ಸ್ ಟ್ರಾಮಾ ಕೆರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ಅವರು ಮಾತನಾಡಿ, ''ಇಂದು ಬೆಳಗ್ಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬರು ಅನುಮಾನಸ್ಪದ ವಸ್ತುವನ್ನ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ವಿಷಯ ತಿಳಿದ ತಕ್ಷಣ ನಮ್ಮ ಸಿಬ್ಬಂದಿ ಅಲ್ಲಿಗೆ ತೆರಳಿದ್ದಾರೆ. ನಂತರ ಶಿಫ್ಟ್ ಡಿಸೈರ್ ಕಾರನ್ನ ತಡೆದು ತಪಾಸಣೆ ನಡೆಸುವಾಗ ಆರೋಪಿ ನಮ್ಮ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಗಾಯಾಳುಗಳು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ'' ಎಂದರು.
''ಆರೋಪಿ ಹಿನ್ನೆಲೆಯನ್ನ ನೋಡಿದಾಗ ಮೂರು ಎನ್ಡಿಪಿಎಸ್ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಅಂತರ್ ಜಿಲ್ಲೆಯ ಮೆಡಿಷಿನ್ಗಳನ್ನ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿದ್ದ. ಅಲ್ಲದೇ, ಹೈದರಾಬಾದ್ನಲ್ಲೂ ಇವನ ಮೇಲೆ ಪ್ರಕರಣ ದಾಖಲಾಗಿರುವುದನ್ನ ನೋಡಿದ್ರೆ ಇವನ ಜಾಲ ವಿಶಾಲವಾಗಿರುವುದು ತಿಳಿದು ಬರುತ್ತೆ. ಹೀಗಾಗಿ ಆಳವಾದ ತನಿಖೆ ಮಾಡುತ್ತೇವೆ. ಮಾದಕ ವಸ್ತುಗಳ ಸಾಗಾಟಕ್ಕೆ ಸಂಬಂಧಿಸಿದಂತೆ 2016ರಿಂದ ಇವನ ಮೇಲೆ ಪ್ರಕರಣಗಳಿವೆ. ಮೂಲತಃ ಇವನು ಕಲಬುರಗಿಯ ಮಕ್ಕಂಪುರ ನಿವಾಸಿ ಎಂಬುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ'' ಎಂದು ತಿಳಿಸಿದರು.