ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಬೆಳಗ್ಗಿನ ಜಾವ ದಟ್ಟ ಮಂಜು ಆವರಿಸಿದ ವಾತಾವರಣವಿದ್ದು, ಪರಿಣಾಮ ಗೋಚರತೆಯ ಮಟ್ಟ ಬಹಳ ಕಡಿಮೆ ಇತ್ತು. ಮಾತ್ರವಲ್ಲದೇ ಹಲವಾರು ರೈಲುಗಳ ಕಾರ್ಯಾಚರಣೆ ಮೇಲೂ ಪರಿಣಾಮ ಬೀರಿದೆ. ದಟ್ಟ ಮಂಜಿನಿಂದಾಗಿ 45 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಯಾವುದೇ ವಿಮಾನಗಳ ಹಾರಾಟದ ಮೇಲೆ ಇದು ಪರಿಣಾಮ ಬೀರಿಲ್ಲ ಎಂದು ವರದಿಯಾಗಿದೆ. "ರನ್ ವೇ ಗೋಚರತೆ ಸುಧಾರಿಸಿರುವ ಕಾರಣ ಎಲ್ಲಾ ವಿಮಾನಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರು ನವೀಕರಿಸಿದ ವಿಮಾನ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ" ಎಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಯಾಣಿಕರಿಗೆ ಅಧಿಕೃತ ಮಾಹಿತಿ ನೀಡಿದೆ.
Update issued at 09:52 hours.
— Delhi Airport (@DelhiAirport) January 11, 2025
Kind attention to all flyers!#FogAlert #DelhiAirport pic.twitter.com/lsGHzSmTpP
ಸಫ್ದರ್ಜಂಗ್ನಲ್ಲಿ ಗೋಚರತೆಯ ಮಟ್ಟ ಆರಂಭದಲ್ಲಿ ಬೆಳಗ್ಗೆ 12.30ರಿಂದ 1.30 ರವರೆಗೆ 50 ಮೀಟರ್ಗೆ ಇಳಿದಿದ್ದರೆ. ನಂತರದಲ್ಲಿ 200 ಮೀಟರ್ಗೆ ಸುಧಾರಿಸಿ, ಬೆಳಗ್ಗೆ 7.30 ರವರೆಗೆ ಹೀಗೆ ಮುಂದುವರೆದಿತ್ತು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಶೀತ ವಾತಾವರಣ ಮುಂದುವರಿಯುವ ನಿರೀಕ್ಷೆಯಿದ್ದು, ದಟ್ಟವಾದ ಮಂಜು ಮತ್ತು ಶೀತ ಅಲೆಗಳಿಂದ ತಕ್ಷಣಕ್ಕೆ ಪರಿಹಾರ ದೊರೆಯುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ.
ಇದರ ಮಧ್ಯೆ ಶನಿವಾರ ಬೆಳಗ್ಗೆ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜು ಮುಸುಕಿವ ವಾತಾವರಣವಿತ್ತು. ಐತಿಹಾಸಿಕ ತಾಜ್ ಮಹಲ್ ಕೂಡ ಮಂಜಿನಿಂದ ಆವೃತವಾಗಿತ್ತು. ಅದೇ ರೀತಿ, ಕಾನ್ಪುರ ಮತ್ತು ಗ್ವಾಲಿಯರ್‌ನಂತಹ ನಗರಗಳು ಸಹ ದಟ್ಟವಾದ ಮಂಜಿನಿಂದ ಆವೃತವಾಗಿದ್ದವು. ಕಾನ್ಪುರದಲ್ಲಿ, ವೃದ್ಧರ ಗುಂಪುಗಳು ಬೆಂಕಿ ಮುಂದೆ ಚಳಿ ಕಾಯಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಇದನ್ನೂ ಓದಿ: ದೆಹಲಿ-ಎನ್ಸಿಆರ್ ಆವರಿಸಿದ ದಟ್ಟ ಮಂಜು: ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ, ಕುಸಿದ ವಾಯುಗುಣಮಟ್ಟ