ದೇವಾಸ್, ಮಧ್ಯಪ್ರದೇಶ: ಮನೆಯಿಂದ ದುರ್ನಾತ ಬರುತ್ತಿರುವ ಹಿನ್ನೆಲೆಯಲ್ಲಿ ಮನೆಯ ನೆರೆ ಹೊರೆಯವರು ನೀಡಿದ ದೂರಿನ ಆಧಾರದ ಮೇಲೆ ಶೋಧ ನಡೆಸಿದಾಗ ಫ್ರಿಡ್ಜ್ನಲ್ಲಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದೆ. ಮಧ್ಯಪ್ರದೇಶದ ದೇವಾಸ್ನಲ್ಲಿನ ವೃಂದಾವನ್ ಕಾಲೋನಿಯಿಂದ ಈ ಆಘಾತಕಾರಿ ಘಟನೆ ವರದಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಲ್ಲಿನ ಸ್ಥಳೀಯ ನಿವಾಸಿಗಳು ನೀಡಿದ ತುರ್ತು ದೂರಿನ ಸೇವೆ ಆಧಾರದ ಮೇಲೆ ಬ್ಯಾಂಕ್ ನೋಟ್ ಪ್ರೆಸ್ ಪೊಲೀಸ್ ಠಾಣಾ ತಂಡ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸುವ ವೇಳೆ ಮೃತದೇಹ ಪತ್ತಯಾಗಿತ್ತು. ಪ್ರಕರಣದ ತನಿಖೆಗೆ ಉಜ್ಜೈನಿಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕೂಡ ಆಗಮಿಸಿದ್ದು, ತನಿಖೆ ನಡೆಸಿದ್ದರು. ಘಟನೆ ಬಗ್ಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಕೊಲೆಯನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ಸಂಜಯ್ ಪಾಟಿದಾರ್ ನನ್ನು ಬಂಧಿಸಲಾಗಿದೆ.
ಮಾರ್ಚ್ 2024 ರಲ್ಲೇ ನಡೆದಿತ್ತು ಕೊಲೆ: ಆರೋಪಿ ಸಂಜಯ್ ಪಾಟಿದಾರ್ ನನ್ನು ಅರೆಸ್ಟ್ ಮಾಡಲಾಗಿದೆ ಎಂದು ದೇವಾಸ್ ಎಸ್ಪಿ ಪುನೀತ್ ಗೆಹ್ಲೋಟ್ ತಿಳಿಸಿದ್ದಾರೆ. ಬಾಡಿಗೆದಾರ ಸಂಜಯ್ ಪಾಟಿದಾರ್ ಕಳೆದ 5 ವರ್ಷಗಳಿಂದ ಪ್ರತಿಭಾ ಅಲಿಯಾಸ್ ಪಿಂಕಿ ಪ್ರಜಾಪತಿಯೊಂದಿಗೆ ಲಿವ್-ಇನ್ ರಿಲೇಷನ್ ಶಿಪ್ ಹೊಂದಿದ್ದರು. ಪ್ರತಿಭಾ ಮದುವೆಯಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಇದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಆರೋಪಿ ಸಂಜಯ್ ತನ್ನ ಸಹಚರ ವಿನೋದ್ ದವೆಯೊಂದಿಗೆ ಸೇರಿ 2024ರ ಮಾರ್ಚ್‌ನಲ್ಲಿ ಪ್ರತಿಭಾಳನ್ನು ಕತ್ತು ಹಿಸುಕಿ ಕೊಂದಿದ್ದರು. ಕೊಲೆಯ ನಂತರ ಶವವನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದ್ದರು.
ಅಚ್ಚರಿ ವಿಷಯ ಎಂದರೆ ಸಂಜಯ್ ಗೆ ಆಗಲೇ ಮದುವೆಯಾಗಿತ್ತು. ಸಂಜಯ್ ಮತ್ತು ಅವರ ಪಾಲುದಾರ ವಿನೋದ್ ದವೆ ಇಂಗೋರಿಯಾ ಜಿಲ್ಲೆಯ ಉಜ್ಜಯಿನಿ ನಿವಾಸಿಗಳಾಗಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇವಾಸ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮನೆಯನ್ನು ಪೊಲೀಸರು ಸೀಲ್ ಮಾಡಿದ್ದಾರೆ.
ಕೊಲೆ ಬಯಲಾಗಿದ್ದು ಹೇಗೆ?: ಘಟನೆ ಕುರಿತು ವಿವರಣೆ ನೀಡಿದ ಪೊಲೀಸ್ ಅಧಿಕಾರಿಗಳು, ಮನೆಯಿಂದ ದುರ್ನಾತ ಬರುತ್ತಿದ್ದ ಹಿನ್ನೆಲೆ ಸ್ಥಳೀಯರು ದೂರು ನೀಡಿದ್ದರು. ಮನೆಯು ಧೀರೇಂದ್ರ ಶ್ರೀವಾತ್ಸವ್ ಎಂಬುವವರಿಗೆ ಸೇರಿದ್ದು, ಅವರು ಕಳೆದ ಜುಲೈನಲ್ಲಿ ಸಂಜಯ್ ಪಾಟಿದಾರ್ ಎಂಬುವವರಿಗೆ ಬಾಡಿಗೆ ನೀಡಿದ್ದರು. ಮಾಲೀಕರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಬಾಡಿಗೆದಾರನಿಗೆ ಹುಡುಕಾಟ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಹೆಂಡತಿ ಅಮಾನುಷವಾಗಿ ಕೊಂದು, ದೇಹ ತುಂಡು ತುಂಡು ಮಾಡಿ ಸುಟ್ಟು ಹಾಕಿದ ವ್ಯಕ್ತಿಯ ಬಂಧನ