ನವದೆಹಲಿ: NEET- UG 2024 ವಿವಾದಕ್ಕೆ ಸಂಬಂಧಿಸಿದಂತೆ 1,563 ಅಭ್ಯರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಿ, ಅವರಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು. ಜೂನ್ 23 ರಂದು ಮರುಪರೀಕ್ಷೆಯನ್ನು ನಡೆಸಲಾಗುವುದು ಎಂದು ಕೇಂದ್ರವು ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳು ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ 2024ರ ನೀಟ್-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕೆಂದು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಇಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ರಜಾಕಾಲದ ಪೀಠ ನಡೆಸಿತು. ಮಂಗಳವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಪೀಠ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ 2024ರ ನೀಟ್ (ಯುಜಿ) ಅನ್ನು ಹೊಸದಾಗಿ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ)ಗೆ ಸೂಚಿಸಿತ್ತು.
ವಿಚಾರಣೆ ವೇಳೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಪರ ವಕೀಲ ಕನು ಅಗರ್ವಾಲ್, 1,563 ಅಭ್ಯರ್ಥಿಗಳಿಗೆ ಗ್ರೇಸ್ ಮಾರ್ಕ್ಗಳಿಲ್ಲದೇ ಅವರ ನಿಜವಾದ ಅಂಕಗಳನ್ನು ತಿಳಿಸಲಾಗುವುದು. ಮತ್ತು ಮರು ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗುವುದು. ಕೌನ್ಸೆಲಿಂಗ್ಗೂ ಮೊದಲು ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು. ಮತ್ತೊಮ್ಮೆ ಪರೀಕ್ಷೆ ಬರೆಯಲು ಬಯಸದವರಿಗೆ ಮೇ 5ರಂದು ನಡೆದ ಪರೀಕ್ಷೆಯ ಆಧಾರದ ಮೇಲೆ ಅವರ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಎಂಬಿಬಿಎಸ್, ಬಿಡಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್ನ ವೇಳಾಪಟ್ಟಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಪೀಠ, "ನಾವು ಕೌನ್ಸೆಲಿಂಗ್ ಅನ್ನುನಿಲ್ಲಿಸುತ್ತಿಲ್ಲ. ನಾವು ಕೌನ್ಸೆಲಿಂಗ್ ಮತ್ತು ಪ್ರವೇಶಾತಿಯನ್ನು ಯಾಕೆ ವಿಳಂಬಗೊಳಿಸಬೇಕು?" ಎಂದು ಅರ್ಜಿದಾರರ ಪರ ವಕೀಲರನ್ನೇ ಪ್ರಶ್ನಿಸಿತು.
ಅನು ಅಗರ್ವಾಲ್, "ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಚಿಸಿದ್ದ ಸಮಿತಿಯು ಜೂನ್ 10, 11 ಹಾಗೂ 12 ರಂದು ಸಭೆಗಳನ್ನು ನಡೆಸಿತು. ಸಮಿತಿಯು 1563 ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸಲು ಶಿಫಾರಸು ಮಾಡಿದೆ. ಮತ್ತು ಆ ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡಲು ಪ್ರಸ್ತಾಪಿಸಿದೆ. ಮರುಪರೀಕ್ಷೆಗೆ ಇಚ್ಛಿಸದ ಅಭ್ಯರ್ಥಿಗಳ ನಿಜವಾದ ಅಂಕಗಳನ್ನು ಪರಿಗಣಿಸಲಾಗುವುದು. ಜೂನ್ 23 ರಂದು ಮರುಪರೀಕ್ಷೆ ನಡೆಸಲಾಗುವುದು. ಕೌನ್ಸೆಲಿಂಗ್ ಪ್ರಾರಂಭವಾಗುವ ಮೊದಲು ಫಲಿತಾಂಶವನ್ನು ಪ್ರಕಟಿಸಲಾಗುವುದು. ಇದರಿಂದ ಅಭ್ಯರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ." ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
NEET-UG, 2024 ಗೆ ಹಾಜರಾಗಿದ್ದ 1,563 ಅಭ್ಯರ್ಥಿಗಳಿಗೆ NTA ಯಾದೃಚ್ಛಿಕವಾಗಿ ಗ್ರೇಸ್ ಅಂಕಗಳನ್ನು ನೀಡಿರುವುದನ್ನು ಪ್ರಶ್ನಿಸಿ EdTech ಸಂಸ್ಥೆಯ 'ಫಿಸಿಕ್ಸ್ ವಲ್ಲಾ' ಮುಖ್ಯ ಕಾರ್ಯನಿರ್ವಾಹಕ ಅಲಖ್ ಪಾಂಡೆ ಸಲ್ಲಿಸಿದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯಿಂದ ಪ್ರತಿಕ್ರಿಯೆ ಕೇಳಿದೆ.
ಇದನ್ನೂ ಓದಿ:ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಮರು ಪರೀಕ್ಷೆಗೆ ಮನವಿ: ಕೇಂದ್ರ, ಎನ್ಟಿಎ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್ - NEET UG 2024