ಕರ್ನಾಟಕ

karnataka

3ನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ - Modi Oath Taking Ceremony

By PTI

Published : Jun 9, 2024, 8:17 AM IST

Updated : Jun 9, 2024, 11:02 AM IST

ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಇಂದು ನರೇಂದ್ರ ಮೋದಿ ಶಪಥ ಪಡೆದುಕೊಳ್ಳಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಸಂಜೆ 7.15ಕ್ಕೆ ಕಾರ್ಯಕ್ರಮ ನಡೆಯಲಿದೆ.

Narendra Modi  NDA  MODI oath taking Ceremony Today
ನರೇಂದ್ರ ಮೋದಿ (ANI)

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಸತತ 3ನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಬಹುಮತದ ಸರ್ಕಾರ ನಡೆಸಿತ್ತು. ಈ ಬಾರಿ ಮೋದಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಬೇಕಿದೆ.

73 ವಯಸ್ಸಿನ ಮೋದಿ ಈ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರನ್ನು ಸರಿಗಟ್ಟಲಿದ್ದಾರೆ. ನೆಹರು 1952, 1957 ಮತ್ತು 1962ರಲ್ಲಿ ಸತತ ಮೂರು ಸಾರ್ವತ್ರಿಕ ಚುನಾವಣೆ ಗೆದ್ದು ಪ್ರಧಾನಿಯಾಗಿದ್ದರು.

ಸಮಾರಂಭಕ್ಕೆ ಗಣ್ಯಾತಿಗಣ್ಯರು:ಮೋದಿ ಮತ್ತು ಸಂಪುಟ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೆರೆ ದೇಶಗಳು ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯ ಗಣ್ಯರು ಹಾಗು ವಿಶೇಷ ಆಹ್ವಾನಿತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡಿವ್ಸ್ ಪ್ರಧಾನಿ ಮೊಹಮ್ಮದ್ ಮೊಯಿಝು, ಸಿಶೆಲ್ಲೆಸ್ ಉಪರಾಷ್ಟ್ರಪತಿ ಅಹಮ್ಮದ್ ಅಫಿಫಿ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗುನಾಥ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್, ಭೂತಾನ್ ಪ್ರಧಾನಿ ತ್ಸೆರಿಂಗ್ ತಾಬ್ಗೆ ಕಾರ್ಯಕ್ರಮದ ಆಮಂತ್ರಣ ಸ್ವೀಕರಿಸಿದ್ದಾರೆ. ಭಾರತದ 'ನೆರೆಹೊರೆ ಮೊದಲು' ನೀತಿ ಮತ್ತು 'SAGAR' ದೂರದೃಷ್ಟಿಯಂತೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಾಯಕರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

2014ರಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿ ನರೇಂದ್ರ ಮೋದಿ ಮೊದಲ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ 'ಸಾರ್ಕ್' ದೇಶಗಳ ನಾಯಕರು ಪಾಲ್ಗೊಂಡಿದ್ದರು. 2019ರಲ್ಲಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವಾಗ BIMSTEC ದೇಶಗಳ ನಾಯಕರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮದಲ್ಲಿ ಸಮಾಜದ ವಿಶೇಷ ಸಾಧಕರಿಗೂ ಆಹ್ವಾನ ನೀಡಲಾಗಿದೆ. ಈ ಪೈಕಿ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಟರ್ಮಿನಸ್- ಸೋಲಾಪುರ್ ವಂದೇ ಭಾರತ್ ರೈಲಿನ ಲೋಕೊ ಪೈಲಟ್ ಸುರೇಖಾ ಯಾದವ್ ಒಬ್ಬರು. ಇವರೂ ಸೇರಿದಂತೆ ಭಾರತೀಯ ರೈಲ್ವೆಯ ಒಟ್ಟು 10 ಲೋಕೊ ಪೈಲಟ್‌ಗಳನ್ನು ಆಹ್ವಾನಿಸಲಾಗಿದೆ.

ಅತಿಥಿಗಳು, ವಿಶೇಷ ಅತಿಥಿಗಳಿಗೆ ಕುಳಿತುಕೊಳ್ಳಲು ಮತ್ತು ಸಂಪುಟ ಸಚಿವರ ಪ್ರಮಾಣ ವಚನಕ್ಕೆ ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭವ್ಯ ಕಾರ್ಯಕ್ರಮಕ್ಕೆ ಹಾಕಲಾಗಿರುವ ಕೆಂಪು ಹಾಸು, ಕುರ್ಚಿಗಳ ಸಿದ್ಧತೆಗಳ ದೃಶ್ಯಾವಳಿಯನ್ನು ರಾಷ್ಟ್ರಪತಿ ಭವನ ಹಂಚಿಕೊಂಡಿದೆ. ದೆಹಲಿ ಪೊಲೀಸರು ಭದ್ರತೆಯ ಹೊಣೆ ಹೊತ್ತಿದ್ದಾರೆ. ರಾಜಧಾನಿಯನ್ನು ನೋ ಫ್ಲೈ ಝೋನ್‌ ಎಂದು ಘೋಷಿಸಲಾಗಿದೆ. ಈ ನಿರ್ಬಂಧ ಇಂದು ಮತ್ತು ನಾಳೆ ಜಾರಿಯಲ್ಲಿರಲಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೀಟು ಗಳಿಕೆ 240ಕ್ಕೆ ಇಳಿದಿದೆ. ಇದು ಸರಳ ಬಹುಮತ 272ಕ್ಕಿಂತ ಕಡಿಮೆ. ಕಳೆದ ಬಾರಿ ಬಿಜೆಪಿ 303 ಸೀಟುಗಳನ್ನು ಗೆದ್ದುಕೊಂಡಿತ್ತು. ಪ್ರಸ್ತುತ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳಲ್ಲಿ ಜಯಿಸಿದ್ದು, ಮೋದಿ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಂಡಿದ್ದಾರೆ. ಮೈತ್ರಿ ಪಕ್ಷಗಳಾದ ಟಿಡಿಪಿ 16, ಜೆಡಿಯು 12 ಸ್ಥಾನಗಳನ್ನು ಪಡೆದಿವೆ.

ಯಾರಿಗೆಲ್ಲ ಮಂತ್ರಿ ಸ್ಥಾನ?:ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್,ಮಾಜಿ ಸಿಎಂಗಳಾದ ಶಿವರಾಜ್ ಸಿಂಗ್ ಚೌಹಾಣ್, ಬಸವರಾಜ ಬೊಮ್ಮಾಯಿ, ಹೆಚ್‌.ಡಿ.ಕುಮಾರಸ್ವಾಮಿ, ಮನೋಹರ ಲಾಲ್ ಕಟ್ಟರ್, ಸರ್ಬಾನಂದ ಸೋನಾವಾಲ್ ಸಂಪುಟ ಸೇರಲಿರುವ ಪ್ರಮುಖರು ಎಂದು ಹೇಳಲಾಗುತ್ತಿದೆ. ಮೈತ್ರಿ ಪಕ್ಷಗಳ ಪೈಕಿ, ಟಿಪಿಡಿಯಿಂದ ರಾಮ್ ಮೋಹನ್ ನಾಯ್ಡು, ಜೆಡಿಯುನಿಂದ ಲಲನ್ ಸಿಂಗ್, ಸಂಜಯ್ ಝಾ ಮತ್ತು ರಾಮ್ ನಾಥ್ ಠಾಕೂರ್ ಮತ್ತು ಲೋಕ ಜನಶಕ್ತಿ ಪಕ್ಷದಿಂದ ಚಿರಾಗ್ ಪಾಸ್ವಾನ್ ಮಂತ್ರಿ ಸ್ಥಾನ ಪಡೆಯುವ ಪ್ರಮುಖರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಸಕಲ ಸಿದ್ಧತೆ: ಆಹ್ವಾನ ಸ್ವೀಕರಿಸಿದ ನೇಪಾಳ ಪ್ರಧಾನಿ, ಶ್ರೀಲಂಕಾ ಅಧ್ಯಕ್ಷರು - Sri Lankan president to arrive on June 9

Last Updated : Jun 9, 2024, 11:02 AM IST

ABOUT THE AUTHOR

...view details