ಮುಂಬೈ:ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರೂಖ್ ಖಾನ್ ಸೇರಿದಂತೆ ಹಲವರಿಗೆ ಬೆದರಿಕೆ ಕರೆಗಳು ಬಂದಿವೆ. ಕಾನೂನು ವಿಶ್ವವಿದ್ಯಾಲಯಕ್ಕೂ ಸ್ಫೋಟಿಸುವ ಇ-ಮೇಲ್ ಕಳುಹಿಸಲಾಗಿದೆ. ಈ ಎಲ್ಲಾ ಘಟನೆಗಳು ತಾಜಾ ಆಗಿರುವ ಮಧ್ಯೆಯೇ ದೇಶದ ಆರ್ಥಿಕ ವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ಬಾಂಬ್ ಬೆದರಿಕೆ ಬಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದ ಅಪಚಿರಿತ ವ್ಯಕ್ತಿಯೊಬ್ಬ ತನ್ನನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಿಇಒ ಎಂದು ಪರಿಚಯಿಸಿಕೊಂಡು, ಆರ್ಬಿಐಗೆ ಬಾಂಬ್ ಇಡುವುದಾಗಿ ಬೆದರಿಕೆ ಒಡ್ಡಿದ್ದಾನೆ.
ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಆರ್ಬಿಐನ ಕಸ್ಟಮರ್ ಕೇರ್ ಸೆಂಟರ್ಗೆ ಕರೆ ಬಂದಿದೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಅದನ್ನು ಸ್ವೀಕರಿಸಿದ್ದು, 'ತಾನು ಉಗ್ರ ಸಂಘಟನೆಯಾದ ಎಲ್ಇಟಿಯ ಸಿಇಒ. ಬ್ಯಾಂಕ್ ಹಿಂಭಾಗದ ರಸ್ತೆಯನ್ನು ಬಂದ್ ಮಾಡಿ. ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಸಂಚಾರವನ್ನು ನಿಲ್ಲಿಸಿ' ಎಂದು ಹೇಳಿದ್ದಾನೆ.
ಇಲ್ಲವಾದಲ್ಲಿ ಆರ್ಬಿಐಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭೀತಿಗೊಳಗಾದ ತಕ್ಷಣವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭದ್ರತಾ ಸಿಬ್ಬಂದಿ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರ್ಬಿಐ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಬೆದರಿಕೆ ಹಾಕಿದ ವ್ಯಕ್ತಿಯ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲು ಸಾಲು ಬೆದರಿಕೆಗಳು:ಕೆಲ ದಿನಗಳಿಂದ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ನವೆಂಬರ್ 14 ರಂದು ಮುಂಬೈನ ಕಾನೂನು ಸಂಸ್ಥೆಗೆ ಬೆದರಿಕೆ ಹಾಕಲಾಗಿತ್ತು. ಇಲ್ಲಿನ ಜೆಎಸ್‌ಎ ಕಾನೂನು ಸಂಸ್ಥೆಗೆ ಫರ್ಜಾನ್ ಅಹ್ಮದ್ ಹೆಸರಿನಲ್ಲಿ ಇ-ಮೇಲ್ ರವಾನಿಸಲಾಗಿದ್ದು, ಬಾಂಬ್ ದಾಳಿ ನಡೆಸುವುದಾಗಿ ಬೆದರಿಸಲಾಗಿತ್ತು. ಅಲ್ಲದೆ, ಅಕ್ಟೋಬರ್ 27ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿತ್ತು. ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಮೂಲಕ, ಪ್ರಯಾಣಿಕರನ್ನು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇನ್ನು, ಖ್ಯಾತ ನಟ ಶಾರುಖ್ ಖಾನ್ ಅವರಿಗೂ ಬೆದರಿಕೆ ಕರೆ ಬಂದಿತ್ತು. ಇದಕ್ಕೂ ಮೊದಲು ಸಲ್ಮಾನ್ ಖಾನ್ಗೂ ಜೀವ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಚುನಾವಣೆ ರ್ಯಾಲಿ ರದ್ದುಗೊಳಿಸಿ ದೆಹಲಿಗೆ ವಾಪಸ್ ತೆರಳಿದ ಕೇಂದ್ರ ಗೃಹಸಚಿವ ಅಮಿತ್ ಶಾ