ಛತ್ರಪತಿ ಸಂಭಾಜಿನಗರ, ಮಹಾರಾಷ್ಟ್ರ: ಕಲ್ಸುಬಾಯಿ ಶಿಖರವು ಮಹಾರಾಷ್ಟ್ರದ ಅತ್ಯುನ್ನತ ಶಿಖರ ಎಂದು ಕರೆಯಲ್ಪಡುತ್ತದೆ. ಈ ಶಿಖರವನ್ನು ಹತ್ತುವುದು ಎಂತಹವರಿಗೂ ಸವಾಲಿನ ಸಂಗತಿಯೇ ಸರಿ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಶಿಖರಾರೋಹಣದ ಪ್ರೇಮಿಗಳು ಈ ಪರ್ವತಕ್ಕೆ ಭೇಟಿ ಕೊಡುತ್ತಾರೆ. ಪ್ರಕೃತಿ ಪ್ರೇಮಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಶಿಖರವನ್ನು ಒಮ್ಮೆ ಏರಿ ಖುಷಿ ಪಡಲು ಬಯಸುತ್ತಾರೆ.
ಅಂದ ಹಾಗೆ, ಛತ್ರಪತಿ ಸಂಭಾಜಿನಗರ ಜಿಲ್ಲೆಯ ಪೈಠಾಣ್ ತಾಲೂಕಿನಲ್ಲಿ ಹುಟ್ಟಿ ಪೋಲಿಯೋ ಪೀಡಿತರಾಗಿ ಜನಿಸಿದ ವಿಕಲಚೇತನ ಶಿವಾಜಿ ಗಡೆ 14 ವರ್ಷಗಳ ಹಿಂದೆ ತಮ್ಮ ಹುಟ್ಟುಹಬ್ಬದ ನಿಮಿತ್ತ ಕಲ್ಸುಬಾಯಿ ಶಿಖರವನ್ನೇರುವ ಅಭಿಯಾನ ಆರಂಭಿಸಿದ್ದರು. ಅವರು ತಮ್ಮ ಇಚ್ಛಾಶಕ್ತಿಯ ಬಲದ ಮೇಲೆ ಮಹಾರಾಷ್ಟ್ರದ ಎವರೆಸ್ಟ್ ಎಂದು ಪರಿಗಣಿಸಲಾದ ಕಲ್ಸುಬಾಯಿ ಶಿಖರವನ್ನು 20 ಬಾರಿ ಏರಿದ್ದಾರೆ. ಈ ಮೂಲಕ ಮನಸ್ಸು ಮಾಡಿದರೆ ಎಂತಹದ್ದೇ ಸಾಧನೆ ಮಾಡಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.
ಹಲವೆಡೆ ಪ್ರವಾಸ: ಪೈಠಾಣ್ ತಾಲೂಕಿನ ವಡ್ವಾಲಿ ಗ್ರಾಮದ ಶಿವಾಜಿ ಗಡೆ ಅವರಿಗೆ ಪಾದಯಾತ್ರೆ ಹಾಗೂ ಕೋಟೆಗಳಿಗೆ ಭೇಟಿ ನೀಡುವ ಹವ್ಯಾಸವಿದೆ. ಈ ಹವ್ಯಾಸದ ಮೂಲಕ, ಅಂಗವಿಕಲರಾದರೂ ಶಿವಾಜಿ ಗಡೆ ಅವರು, ಅಕೋಲೆ ತಾಲೂಕು ಮತ್ತು ನಗರ ಜಿಲ್ಲೆಯಲ್ಲಿ ಇರುವ ಹಾಗೂ ಮಹಾರಾಷ್ಟ್ರದ ಎವರೆಸ್ಟ್ ಎಂದು ಪರಿಗಣಿಸಲಾದ 1646 ಮೀಟರ್ (5400-ಅಡಿ) ಕಲ್ಸುಬಾಯಿ ಶಿಖರವನ್ನು ಇಪ್ಪತ್ತು ಬಾರಿ ಯಶಸ್ವಿಯಾಗಿ ಏರಿದ್ದಾರೆ. ಇದೇ ನವೆಂಬರ್ 3ರ ಭಾನುವಾರದಂದು ಶಿವಾಜಿ ಗಡೆ ಅವರು ತಮ್ಮ ನಾಲ್ವರು ಸಹೋದ್ಯೋಗಿಗಳಾದ ಕಚ್ರು ಚಂಬರೆ, ಕಲ್ಯಾಣ್ ಘೋಲಾಪ್, ಸಂತೋಷ್ ಬಟುಲೆ ಮತ್ತು ಸೂರಜ್ ಬಟುಲೆ ಅವರೊಂದಿಗೆ ಈ ಸಾಧನೆ ಮಾಡಿದ್ದಾರೆ. ಕಠಿಣವಾದ ಶಿಖರವನ್ನು ಏರಿ, ಅದರ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಗಮನ ಸೆಳೆದಿದ್ದಾರೆ.