ನವದೆಹಲಿ: ಜಾಗ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬರ ಇಡೀ ಮನೆಯನ್ನೇ ಕೆಡವಿದ ಉತ್ತರಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಸಂತ್ರಸ್ತರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬುಧವಾರ ಸೂಚನೆ ನೀಡಿದೆ. ಜೊತೆಗೆ ಈ ಆದೇಶವನ್ನು ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಪಾಲಿಸುವಂತೆಯೂ ತಾಕೀತು ಮಾಡಿದೆ.
ಅಕ್ರಮ ನಿರ್ಮಾಣ ಹೆಸರಿನಲ್ಲಿ ಮನೆ ಕೆಡವಿದ್ದರ ವಿರುದ್ಧ ಪರಿಹಾರ ಕೋರಿ ಸಂತ್ರಸ್ತ ವ್ಯಕ್ತಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಖಂಡಿಸಿದೆ.
ಮನೆ ಕೆಡವಿದ್ದಕ್ಕೆ ಪರಿಹಾರ ನೀಡಿ: ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠವು, ಅಧಿಕಾರಿಗಳ ಕ್ರಮವನ್ನು ಟೀಕಿಸಿತು. ವ್ಯಕ್ತಿಯೊಬ್ಬರು ಅಕ್ರಮವಾಗಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ, ಯಾವುದೇ ಸೂಚನೆ ಇಲ್ಲದೇ ರಾತ್ರೋರಾತ್ರಿ ಇಡೀ ಮನೆಯನ್ನು ಕೆಡವಲು ಹೇಗೆ ಸಾಧ್ಯ. ಇಂತಹ ಕಠಿಣ ಕ್ರಮ ಕಾನೂನುಬಾಹಿರ ಎಂದು ಹೇಳಿದೆ.
ಅರ್ಜಿದಾರರು ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ವಾದಿಸಿತು. ದೂರುದಾರ, 3.7 ಮೀಟರ್ ಜಾಗವನ್ನು ಅತಿಕ್ರಮಣ ಮಾಡಿದ್ದಾನೆಂದು ಹೇಳಿದ್ದೀರಿ. ಅಷ್ಟು ಜಾಗದ ಅತಿಕ್ರಮಕ್ಕಾಗಿ ಆತನಿಗೆ ಸಂಬಂಧಿಸಿದ ಇಡೀ ಮನೆಯನ್ನು ಕೆಡವಲು ಅವಕಾಶವಿಲ್ಲ. ಜೊತೆಗೆ ಆತನಿಗೆ ಎಚ್ಚರಿಕೆ ಪತ್ರವನ್ನೂ ನೀಡಿಲ್ಲ. ಏಕಾಏಕಿ ಸೂರು ನೆಲಸಮ ಮಾಡುವ ಅಧಿಕಾರ ಆಡಳಿತಕ್ಕೆ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಇದು ತೀರಾ ಕಠಿಣ ಕ್ರಮವಾಗಿದೆ. ನಿಯಮಗಳನ್ನು ಅನುಸರಿಸಬೇಕಾದ ಅಧಿಕಾರಿಗಳು ಅತಿಕ್ರಮ ಮಾಡಿದವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂಬುದು ಸರ್ಕಾರ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ತೆರಳಿ ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡಿದ್ದೀರಿ ಅಷ್ಟೆ. ತೆರವಿಗೂ ಮುನ್ನ ಸಮಯ ನೀಡಬೇಕಿತ್ತು. ಇದ್ಯಾವುದೂ ಪ್ರಕರಣದಲ್ಲಿ ನಡೆದಿಲ್ಲ. ಹೀಗಾಗಿ ಸಂತ್ರಸ್ತ ವ್ಯಕ್ತಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿ ಎಂದು ಆದೇಶಿಸಿದೆ.
ಪ್ರಕರಣವೇನು?: ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ 2019 ರಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಇದರಲ್ಲಿ ವ್ಯಕ್ತಿಯೊಬ್ಬರು 3.7 ಮೀಟರ್ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾಗಿ ಆರೋಪಿಸಿ ಅಧಿಕಾರಿಗಳು ಆತನ ಇಡೀ ಮನೆಯನ್ನು ಕೆಡವಿದ್ದರು. ಅದರಂತೆ ನೂರಕ್ಕೂ ಅಧಿಕ ಜನರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ. ಇದರ ವಿರುದ್ಧ ಸಂತ್ರಸ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
ಇದನ್ನೂ ಓದಿ: ಹಿರಿಯ ನಾಗರಿಕರು, ಅಯ್ಯಪ್ಪ ಸ್ವಾಮಿಗಳೇ ವಂಚಕರ ಟಾರ್ಗೆಟ್! ಮೋಸದ ಮುಖವಾಡದ ಬಗ್ಗೆ ಪೊಲೀಸರ ಮಾಹಿತಿ