ಬೆಂಗಳೂರು: 2025ರ ವೇಳೆಗೆ ಸುಮಾರು 30 ಕಿ.ಮೀ ಹಾಗೂ 2026ರ ವೇಳೆಗೆ 175 ಕಿ.ಮೀ ನೂತನ ಮೆಟ್ರೋ ಮಾರ್ಗ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಮೆಟ್ರೋ ಹಸಿರು ಮಾರ್ಗದಲ್ಲಿಂದು ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರದ ತನಕ ವಿಸ್ತರಣೆ ಆಗಿರುವ ನೂತನ ಮಾರ್ಗದಲ್ಲಿ ಪ್ರಾಯೋಗಿಕ ಮೆಟ್ರೋ ರೈಲು ಸಂಚಾರವನ್ನು ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಈಗಾಗಲೇ 1,130 ಕೋಟಿ ವೆಚ್ಚದಲ್ಲಿ 21 ಹೊಸ ರೈಲುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಹಣ ಕಟ್ಟಲಾಗಿದೆ. ಇದರಿಂದ ಹೊಸ ರೈಲುಗಳು ಆದಷ್ಟು ಬೇಗ ಸೇವೆಗೆ ಲಭ್ಯವಾಗಲಿವೆ. ಮೆಟ್ರೋ ಮಾರ್ಗದ ಒಂದು ಹಾಗೂ ಎರಡನೇ ಹಂತಗಳನ್ನು ಪೂರ್ಣಗೊಳಿಸಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಮಂಜುನಾಥ ನಗರ ನಿಲ್ದಾಣದಲ್ಲಿ ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ಅನುಕೂಲ ಮಾಡಿಕೊಡಲಾಗುತ್ತಿದೆ. ಯಶವಂತಪುರ ನಿಲ್ದಾಣದಲ್ಲಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೇ ಸಂಚರಿಸಲು ಭಾರತೀಯ ರೈಲ್ವೆ ಹಾಗೂ ನಮ್ಮ ಮೆಟ್ರೋ ಸಂಸ್ಥೆ ಪಾದಚಾರಿ ಮೇಲ್ಸೇತುವೆ ಸೇರಿದಂತೆ ಇತರ ಅನುಕೂಲಗಳನ್ನು ಮಾಡಲು ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.
ಚಿಕ್ಕಬಿದರಕಲ್ಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯೊಟ್ಟಿಗೆ ಸೇರಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಮಾದಾವರ ಮೆಟ್ರೋ ನಿಲ್ದಾಣದ ಬಳಿಯೂ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಎನ್.ಎಚ್ ಸಂಸ್ಥೆಯವರ ಬಳಿ ಮಾತುಕತೆ ನಡೆಸಲಾಗುತ್ತಿದೆ ಎಂದರು.
ವಿಸ್ತರಣೆಯಾದ ಮಾರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವವರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ರಹಿತವಾಗಿ ನಗರ ಪ್ರದಕ್ಷಿಣೆ ಮಾಡಬಹುದು ಹಾಗೂ ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಬಹುದು ಎಂದು ಹೇಳಿದರು.
ನಾಗಸಂದ್ರದಿಂದ ಮೂರು ಕಿ.ಮೀ ದೂರವಿರುವ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ವಿಸ್ತರಿತ ನೂತನ ಮಾರ್ಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಉದ್ಘಾಟನೆ ಮಾಡಲಾಗಿದೆ. ಈ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಹಾಗೂ ಇತರ ಜನಪ್ರತಿನಿಧಿಗಳನ್ನು ಆಹ್ವಾನಿಸಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು ಎಂದರು.
ಪ್ರಸ್ತುತ ಮೆಟ್ರೋ ಹಸಿರು ಮಾರ್ಗವು 33.46 ಕಿ.ಮೀ ಉದ್ದವಿದೆ. ನೇರಳೆ ಮಾರ್ಗ 40.5 ಕಿ.ಮೀ ಉದ್ದವಿದೆ. ಈ ಮಹತ್ತರವಾದ ಕಾರ್ಯ ಸಾಕಾರಗೊಳ್ಳಲು ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ ಹಾಗೂ ಕೈ ಜೋಡಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಂಗಳೂರಿನ ಜನತೆಗೆ ಅಭಿನಂದನೆ ತಿಳಿಸಿದರು.
ದೇಶದಲ್ಲಿಯೇ ಹೆಚ್ಚು ಪ್ರಯಾಣಿಕರ ಸಂಚಾರ: ದೆಹಲಿ, ಮುಂಬೈ ಸೇರಿದಂತೆ ದೇಶದ ಇತರಡೆಗಳಲ್ಲಿ ಇರುವ ಮೆಟ್ರೋಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಿಂತ ಬೆಂಗಳೂರಿನಲ್ಲಿರುವ 76.95 ಕಿ.ಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ನಿತ್ಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದಾರೆ. ನಮ್ಮ ಮೆಟ್ರೋದಿಂದ ಬೆಂಗಳೂರಿನ ನಾಗರಿಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಂಗಳೂರು: ಡಿ.10ರೊಳಗೆ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಲು ಗಡುವು