ವಾಷಿಂಗ್ಟನ್, ಅಮೆರಿಕ: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್ ಅವರ ಕಠಿಣ ಸ್ಪರ್ಧೆಯನ್ನು ಮೆಟ್ಟಿನಿಂತು ಎರಡನೇ ಬಾರಿಗೆ ಅಧ್ಯಕ್ಷೀಯ ಗಾದಿ ಏರಿದ್ದಾರೆ. ಮ್ಯಾಜಿಕ್ ನಂಬರ್ 270 ಅನ್ನು ದಾಟಿದ್ದಾರೆ. 2025 ರ ಜನವರಿ 20 ರಂದು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟ್ರಂಪ್ ಅವರು, ಮಾಜಿ ಅಧ್ಯಕ್ಷ ಗ್ರೋವರ್ ಕ್ಲೀವ್‌ಲ್ಯಾಂಡ್ ನಂತರ ಒಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬಿಡುವಿನ ನಂತರ ಮತ್ತೊಮ್ಮೆ ಅಧ್ಯಕ್ಷರಾದ ಎರಡನೇ ವ್ಯಕ್ತಿ ಆಗಲಿದ್ದಾರೆ. ಗ್ರೋವರ್ 1884 ಮತ್ತು 1892 ರ ಚುನಾವಣೆಗಳಲ್ಲಿ ಅಧ್ಯಕ್ಷರಾಗಿ ಗೆದ್ದಿದ್ದರು. ಟ್ರಂಪ್ 2016 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2020 ರಲ್ಲಿ ಜೋ ಬೈಡನ್ ವಿರುದ್ಧ ಸೋತಿದ್ದರು.
ಕಮಲಾ ಹ್ಯಾರಿಸ್ ವಿರುದ್ಧ ಗೆಲ್ಲಲು ಟ್ರಂಪ್ ಇನ್ನಿಲ್ಲದ ಕಸರತ್ತು ಮಾಡಬೇಕಾಯಿತು. ಅವರ ಗೆಲುವಿಗೆ ಹಲವು ಪ್ರಮುಖ ಅಂಶಗಳು ಕಾರಣವಾಗಿವೆ. ಅಮೆರಿಕದ ಆರ್ಥಿಕತೆ, ಅಕ್ರಮ ವಲಸೆಯಂತಹ ವಿಷಯಗಳಲ್ಲಿ ಟ್ರಂಪ್ ಅವರ ನಿಲುವು ಮತದಾರರನ್ನು ಆಕರ್ಷಿಸಿದಂತಿದೆ. ಮೇಲಾಗಿ, ಯುವ ಮತದಾರರು ಈ ಬಾರಿ ಟ್ರಂಪ್‌ಗೆ ಮಣೆ ಹಾಕಿದ್ದಾರೆ.
ಆರ್ಥಿಕತೆಯೇ ಮುಖ್ಯ ಸಮಸ್ಯೆ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ದೇಶದ ಆರ್ಥಿಕತೆ. ಅನೇಕ ಅಮೆರಿಕನ್ನರು ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ಕೇವಲ ಕಾಲು ಭಾಗದಷ್ಟು ಅಮೆರಿಕನ್ನರು ದೇಶದ ಈಗಿನ ಸ್ಥಿತಿಗೆ ತೃಪ್ತರಾಗಿದ್ದಾರೆ. ಮೂರನೇ ಎರಡರಷ್ಟು ಜನರು ಆರ್ಥಿಕ ಬಿಕ್ಕಟ್ಟಿಗೆ ತೀವ್ರ ಆಕ್ಷೇಪ ಹೊಂದಿದ್ದಾಗಿ ವರದಿಯೊಂದು ತಿಳಿಸಿದೆ. ಆರ್ಥಿಕತೆಯ ವಿಷಯದಲ್ಲಿ ಬೈಡನ್ ಸರ್ಕಾರದ ನೀತಿಗಳ ವಿರುದ್ಧ ಜನರ ಆಕ್ಷೇಪವಿದೆ. 10 ಮತದಾರರಲ್ಲಿ ನಾಲ್ವರು ಮಾತ್ರ ಬೈಡನ್ ಕಾರ್ಯವೈಖರಿಯನ್ನು ಒಪ್ಪಿದ್ದಾರೆ. ಇದು ಡೊನಾಲ್ಡ್ಗೆ 'ಟ್ರಂಪ್ ಕಾರ್ಡ್' ಆಗಿದೆ.
ದುರ್ಬಲಗೊಂಡ ಆರ್ಥಿಕತೆಯನ್ನು ಟ್ರಂಪ್ ಮೇಲೆತ್ತುವ ವಿಶ್ವಾಸ ಮತದಾರರದ್ದಾಗಿದೆ. ಚುನಾವಣಾ ಪ್ರಚಾರದಲ್ಲಿ, ಟ್ರಂಪ್ ಮುಖ್ಯವಾಗಿ ಅಮೆರಿಕದ ಆರ್ಥಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಬೈಡನ್ ಸರ್ಕಾರದ ಮೇಲೆ ದಾಳಿ ಮಾಡಿದ್ದರು. ಆಮದುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಭರವಸೆಯು ಟ್ರಂಪ್‌ಗೆ ಪರ ಗಾಳಿ ಬೀಸಲು ನೆರವಾಯಿತು.
ಕಠಿಣ ವಲಸೆ ನೀತಿ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ರ ವಲಸೆ ನೀತಿಯು ಮತದಾರರನ್ನು ಸೆಳೆದಿದೆ. ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಆಯಾ ದೇಶಗಳಿಗೆ ವಾಪಸ್ ಕಳುಹಿಸುವುದಾಗಿ ಟ್ರಂಪ್ ನೀಡಿರುವ ಹೇಳಿಕೆಗಳು ಜನರನ್ನು ಮೆಚ್ಚಿಸಿದೆ. ವಲಸೆ ನೀತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಟ್ರಂಪ್ ಅವರ ವಾಗ್ದಾನವು ಗೆಲುವಿಗೆ ಕಾರಣಗಳಲ್ಲಿ ಒಂದಾಗಿದೆ.
ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುವ ಜನರಿಗೆ ಜನಿಸಿದ ಮಕ್ಕಳ ಜನ್ಮದ ಹಕ್ಕು ನೀತಿಯನ್ನು ಪರಿಶೀಲಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ನಿರಾಶ್ರಿತರ ನೀತಿಗಳನ್ನು ಪರಿಷ್ಕರಿಸುವ ಅವರ ಭರವಸೆ ಮತದಾರರನ್ನು ಆಕರ್ಷಿಸಿದೆ. ವಿಶ್ವದಲ್ಲಿಯೇ ಅತಿದೊಡ್ಡ ಗಡೀಪಾರು ಮಾಡುವ ಟ್ರಂಪ್ ಭರವಸೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೇ, ಬೈಡನ್ ಅಧಿಕಾರಾವಧಿಯಲ್ಲಿ ಗಡಿಯಲ್ಲಿ ಅಕ್ರಮ ವಲಸಿಗರು ದಾಖಲೆ ಮಟ್ಟದಲ್ಲಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಮತದಾರರು ಟ್ರಂಪ್ ಬೆನ್ನಿಗೆ ನಿಂತಿದ್ದಾರೆ ಎಂದೂ ಸಮೀಕ್ಷೆಗಳು ಹೇಳಿವೆ.
ಟ್ರಂಪ್‌ಗೆ ಪ್ಲಸ್ ಆದ ಕೇಸ್: ಮಾಜಿ ಅಧ್ಯಕ್ಷರ ಮೇಲೆ ದಾಖಲಾದ ಹಲವು ಕೇಸ್ಗಳು ಚುನಾವಣೆಯಲ್ಲಿ ಪ್ಲಸ್ ಆಗಿರುವ ಪರಿಣಮಿಸಿರುವ ಸಾಧ್ಯತೆ ಇದೆ. ಬೈಡನ್ ಸರ್ಕಾರ ಟ್ರಂಪ್ ಅವರನ್ನು ರಾಜಕೀಯ ಬಲಿಪಶುವನ್ನಾಗಿ ಮಾಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿತ್ತು. ಹೀಗಾಗಿಯೇ, ಅವರ ಸಾರ್ವಜನಿಕ ಬೆಂಬಲವು ಶೇಕಡಾ 40 ಕ್ಕಿಂತ ಕಡಿಮೆ ಇರಲಿಲ್ಲ. ಪದೇ ಪದೆ ಅವರನ್ನು ಜೈಲು, ಕೋರ್ಟ್ ಮುಂದೆ ನಿಲ್ಲಿಸಿದ್ದು, ಜನರಲ್ಲಿ ಟ್ರಂಪ್ ಮೇಲೆ ಸಹಾನುಭೂತಿ ಮೂಡಲು ಕಾರಣವಾಯಿತು. ಡೆಮಾಕ್ರಟಿಕ್ ಬೆಂಬಲಿಗರನ್ನು ರಿಪಬ್ಲಿಕನ್ ಪಕ್ಷಕ್ಕೆ ಕರೆತರುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದು, ಅಮೆರಿಕನ್ ಉದ್ಯಮಗಳಿಗೆ ಆಮದುಗಳ ಮೇಲಿನ ಸುಂಕ ಕಡಿಮೆ ಮಾಡುವ ಭರವಸೆ ವರ್ಕೌಟ್ ಆದಂತಿದೆ.
ಬೈಡನ್ಗೆ ನೆಗೆಟಿವ್ ಆದ ಯುದ್ಧದ ನೆರವು: ಟ್ರಂಪ್ ಆಡಳಿತದ ವೇಳೆ ನಿರಂಕುಶ ನಾಯಕರೊಂದಿಗೆ ಸ್ನೇಹ ಬೆಳೆಸುವ ಮೂಲಕ ಅಮೆರಿಕದ ಮಿತ್ರರಾಷ್ಟ್ರಗಳನ್ನು ದುರ್ಬಲಗೊಳಿಸಿದ ಆರೋಪವಿದೆ. ಆದರೆ, ಇದನ್ನು ಮೀರಿ ಅನಿರೀಕ್ಷಿತ ಪ್ರಚಾರ ನಡೆಸಿದರು. ತಮ್ಮ ಅಧಿಕಾರವಧಿಯಲ್ಲ ಯಾವುದೇ ದೊಡ್ಡ ಯುದ್ಧಗಳು ನಡೆದಿಲ್ಲ. ಬೈಡನ್ ಆಡಳಿತದಲ್ಲಿ ಅಮೆರಿಕ ದುರ್ಬಲವಾಗಿದೆ. ಉಕ್ರೇನ್ ಮತ್ತು ಇಸ್ರೇಲ್‌ಗೆ ಯುದ್ಧದ ನೆರವಿನ ಹಣ ಭಾರೀ ಪ್ರಮಾಣದಲ್ಲಿ ಹರಿದು ಹೋಗಿದೆ. ಇದು ಅಮೆರಿಕಕ್ಕೆ ಹೊರೆಯಾಗಲಿದೆ ಎಂದು ಜನರನ್ನು ನಂಬಿಸಿದರು. ಜೊತೆಗೆ, ಬಹುಪಾಲು ಮತದಾರರು ಟ್ರಂಪ್ ಅವರನ್ನು ಕಮಲಾ ಹ್ಯಾರಿಸ್‌ಗಿಂತ ಪ್ರಬಲ ನಾಯಕ ಎಂದು ಪರಿಗಣಿಸಿದ್ದಾರೆ.
ಒಲವು ತೋರಿದ ಮುಸ್ಲಿಂ ಮತದಾರರು: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಬೈಡನ್ ಸರ್ಕಾರದ ನೀತಿಗಳು ಅಮೆರಿಕದ ಮುಸ್ಲಿಂ ಮತದಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಸಾಮಾನ್ಯವಾಗಿ ವಲಸಿಗರು ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕುತ್ತಾರೆ. ಆದರೆ, ಪಶ್ಚಿಮ ಏಷ್ಯಾದಲ್ಲಿ ಆ ಪಕ್ಷ ಅನುಸರಿಸಿದ ನೀತಿಗಳು ಅರಬ್ ವಲಸಿಗರಲ್ಲಿ ತೀವ್ರ ತಳಮಳ ಸೃಷ್ಟಿಸಿವೆ. ಇದರಿಂದ ವಲಸಿಗ ಮುಸ್ಲಿಂ ಮತದಾರರು ಟ್ರಂಪ್ ಪರ ಪೂರ್ಣವಾಗಿ ವಾಳಿದ್ದಾರೆ. ಇದು ದೊಡ್ಡ ಲಾಭ ತಂದು ಕೊಟ್ಟಿತು. ದೇಶದ ಸ್ವಿಂಗ್ ರಾಜ್ಯಗಳಲ್ಲಿ ಒಂದಾದ ಮಿಚಿಗನ್ ಹೆಚ್ಚಿನ ಸಂಖ್ಯೆಯ ಅಮೇರಿಕನ್ ಮುಸ್ಲಿಂ ಮತದಾರರನ್ನು ಹೊಂದಿದೆ. ಮಿಚಿಗನ್ನಲ್ಲಿ ಟ್ರಂಪ್ ಗೆಲುವನ್ನು ಖಾತ್ರಿಪಡಿಸುವಷ್ಟು ಮತಗಳು ಇಲ್ಲಿ ಬಿದ್ದಿವೆ. ಇದು ಪೆನ್ಸಿಲ್ವೇನಿಯಾದ ಮೇಲೂ ಪ್ರಭಾವ ಬೀರಿ, ಅಲ್ಲಿನ ಮತದಾರರು ಟ್ರಂಪ್ ಬಗ್ಗೆ ಒಲವು ತೋರಿದ್ದಾರೆ.
ಇವೂ ಓದಿ: ಅಮೆರಿಕದ 'ಸೆಕೆಂಡ್ ಲೇಡಿ' ಗೌರವಕ್ಕೆ ಪಾತ್ರರಾದ ತೆಲುಗು ಮಹಿಳೆ: ಯಾರೀ ಉಷಾ ಚಿಲುಕುರಿ?