ಪುದುಚೇರಿ : ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಮುಖ್ಯವಾಗಿ ಹಿರಿಯ ನಾಗರಿಕರೇ ಗುರಿಯಾಗುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳಂತೆ ನಟಿಸುತ್ತಿರುವ ವಂಚಕರು, ಹಿರಿಯ ನಾಗರಿಕರಿಂದ ಹಣ ಸುಲಿಯುತ್ತಿರುವ ಹೊಸ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಹೀಗೆ ವಂಚನೆಗೆ ಒಳಗಾದ ಬಗ್ಗೆ ಪುದುಚೇರಿಯಲ್ಲಿ 50 ದೂರುಗಳು ದಾಖಲಾಗಿವೆ ಎಂದು ಇಲ್ಲಿನ ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳಂತೆ ಕರೆ ಮಾಡುವ ವಂಚಕರು, ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗಿದೆ, ಗಿಫ್ಟ್ ಬಂದಿದೆ, ಕೆವೈಸಿ ಅಪ್ಡೇಟ್, ಆಧಾರ್ ಕಾರ್ಡ್ ಅಪ್ಡೇಟ್, ಪಿಂಚಣಿ ಪಾವತಿ ಆದೇಶ, ಬ್ಯಾಂಕ್ ಖಾತೆ ವಿವರ ಮತ್ತು ಪ್ಯಾನ್ ಕಾರ್ಡ್ ಅಪ್ಡೇಟ್ಗಳಂತಹ ಮಾಹಿತಿಯನ್ನು ನವೀಕರಿಸಲಾಗುತ್ತದೆ ಎಂದು ಹೇಳಿ ಹಲವರನ್ನು ವಂಚಿಸುತ್ತಿದ್ದಾರೆ. ಹೀಗೆ ಪುದುಚೇರಿಯಲ್ಲಿ ಹಲವರು ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ 50 ದೂರುಗಳು ದಾಖಲಾಗಿವೆ. ಹಿರಿಯ ನಾಗರಿಕರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸಿದ ದೂರುಗಳ ಆಧಾರದ ಮೇಲೆ ಪುದುಚೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳಂತೆ ಹಿರಿಯ ನಾಗರಿಕರನ್ನು ಭೇಟಿ ಮಾಡುವ ವಂಚಕರು, ಒಟಿಪಿ ಸೇರಿ ಇತರ ಮಾಹಿತಿ ಸಂಗ್ರಹಿಸಿ ಹಣ ಎಗರಿಸುತ್ತಿದ್ದಾರೆ. ಹಿರಿಯ ನಾಗರಿಕರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದಂತೆ ಹಾಗೂ ಒಟಿಪಿ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಫೋನ್ ಕರೆಗಳ ಮೂಲಕ ಒಟಿಪಿ ಸೇರಿದಂತೆ ಅಂತಹ ಸೂಕ್ಷ್ಮ ಮಾಹಿತಿಯನ್ನು ಯಾವುದೇ ಬ್ಯಾಂಕ್ ಅಧಿಕಾರಿಗಳು ಕೇಳುವುದಿಲ್ಲ. ಹಾಗಾಗಿ ಮೋಸದ ಬಲೆಗೆ ಬೀಳದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಶಬರಿಮಲೆ ಯಾತ್ರಾರ್ಥಿಗಳಿಗೂ ಎಚ್ಚರಿಕೆ: ಶಬರಿಮಲೆ ಯಾತ್ರೆಗೆ ತೆರಳುತ್ತಿರುವವರನ್ನು ಸಹ ಟಾರ್ಗೆಟ್ ಮಾಡಿಕೊಂಡಿರುವ ವಂಚಕರು, ಸರ್ಕಾರಿ ವಿಮಾ ಯೋಜನೆಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಹೇಳಿ ಅವರಿಂದಲೂ ದುಡ್ಡು ಕೀಳುವ ಮತ್ತೊಂದು ಜಾಲವನ್ನು ಕಂಡುಕೊಂಡಿದ್ದಾರೆ ಎಂದು ಅದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಶಬರಿಮಲೆ ಯಾತ್ರಿಕರು ತೀರ್ಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಕೇರಳ ಸರ್ಕಾರ ಘೋಷಿಸಿದ ಬಳಿಕ ಹಣ ಕೀಳುವ ಇಂತಹ ಜಾಲ ಹೆಚ್ಚಾಗಿವೆ. ಅದನ್ನೇ ನೆಪ ಮಾಡಿಕೊಂಡ ವಂಚಕರು, ಯಾತ್ರಾರ್ಥಿಗಳಿಗೆ ಸಂಸ್ಕರಣಾ ಶುಲ್ಕಗಳು, ಜಿಎಸ್‌ಟಿ ಮತ್ತು ವಿಮಾ ಯೋಜನೆ ಸೇರಿ ಇತರ ಶುಲ್ಕಗಳನ್ನು ಪಾವತಿಸಲು ಮನವೊಲಿಸುತ್ತಾರೆ. ಈ ರೀತಿಯ ಪ್ರಕರಣಗಳು ಕೂಡ ದಾಖಲಾಗಿವೆ. ಕೇರಳ ಸರ್ಕಾರವು ಅಂತಹ ಯಾವುದೇ ಶುಲ್ಕ ಅಥವಾ ವಿಮೆ ದಾಖಲಾತಿ ಅಗತ್ಯವಿಲ್ಲ ತಿಳಿಸಿದೆ. ಹಾಗಾಗಿ ಅಂತಹ ಬೇಡಿಕೆಗಳಿಗೆ ಸ್ಪಂದಿಸಿ ಹಣವನ್ನು ವರ್ಗಾವಣೆ ಮಾಡದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 3 ಬಾರಿ 10ನೇ ತರಗತಿ ಫೇಲ್: ಪೊಲೀಸ್ ಅಧಿಕಾರಿಯಂತೆ ಬಿಂಬಿಸಿಕೊಂಡು ಹಲವರಿಗೆ ವಂಚನೆ, ಈಗ ಅಂದರ್!