ಲಕ್ನೋ (ಉತ್ತರ ಪ್ರದೇಶ):ಇಲ್ಲಿನಮಾದೇ ಗಂಜ್ ಪ್ರದೇಶದಲ್ಲಿತನ್ನ ಮನೆಯ ಟೆರೇಸ್‌ನಲ್ಲಿ ಮದ್ಯ ಸೇವನೆಗೆ ಅವಕಾಶ ನಿರಾಕರಿಸಿದ್ದಕ್ಕೆ ಸ್ಥಳೀಯ ಗೂಂಡಾಗಳು ವ್ಯಾಪಾರಿಯೊಬ್ಬರನ್ನು ಛಾವಣಿಯ ಮೇಲಿಂದ ಎಸೆದಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೇಲಿಂದ ಬಿದ್ದ ಮೇಲೆಯೂ ವ್ಯಾಪಾರಿಗೆ ಗೂಂಡಾಗಳು ಮತ್ತೆ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಕ್ನೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.
ಐವರು ಗೂಂಡಾಗಳು ಬಲವಂತವಾಗಿ ವ್ಯಾಪಾರಿಯ ಮನೆಗೆ ನುಗ್ಗಿ ಮದ್ಯ ಸೇವಿಸಲು ಆತನ ಛಾವಣಿಗೆ ಹೋಗುವುದಕ್ಕೆ ಅನುಮತಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ವ್ಯಾಪಾರಿ ನಿರಾಕರಿಸಿದಾಗ, ದುಷ್ಕರ್ಮಿಗಳು ಅವರನ್ನು ಛಾವಣಿಯಿಂದ ನೆಲಕ್ಕೆ ಎಸೆದಿದ್ದಾರೆ.
ಆರೋಪಿಗಳಾದ ನಿಕ್ಕಿ, ಸಾಕೇತ್ ಮತ್ತು ಅಮಿತ್, ಗೌತಮ್ ಮತ್ತು ಅಂಕುರ್ ಮದ್ಯದ ಅಮಲಿನಲ್ಲಿ ಆಗಾಗ ಗಲಾಟೆ ಮಾಡುತ್ತಿದ್ದರು ಮತ್ತು ನೆರೆಹೊರೆಯವರಲ್ಲಿ ಬೆದರಿಕೆಯನ್ನು ಸೃಷ್ಟಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಅಮಿತ್, ಗೌತಮ್ ಮತ್ತು ಅಂಕುರ್ ಅವರು ವ್ಯಾಪಾರಿ ಯಾದವ್‌ನನ್ನು ಎತ್ತಿಕೊಂಡು ಕಟ್ಟಡದ ಮೊದಲ ಮಹಡಿಯ ಟೆರೇಸ್‌ನಿಂದ ಕೊಲೆ ಮಾಡುವ ಉದ್ದೇಶದಿಂದ ಕೆಳಗೆ ಎಸೆದಿರುವುದನ್ನು ಕಾಣಬಹುದು. ವಿಡಿಯೋದ ನಂತರದ ಭಾಗದಲ್ಲಿ, ದಾರಿಹೋಕರೊಬ್ಬರು ಇವರಿಗೆ ಸಹಾಯವನ್ನು ನೀಡಲು ಪ್ರಯತ್ನಿಸುತ್ತಿರುವುದು ದಾಖಲಾಗಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಗೂಂಡಾಗಳು ಯಾದವ್ ಮೇಲೆ ಮತ್ತೆ ಹಲ್ಲೆ ಮುಂದುವರೆಸಿದ್ದಾರೆ.