ನವದೆಹಲಿ :ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವ ಸಲುವಾಗಿ ಮತ್ತು ಅವರ ಚಲನವಲನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶಯಾಸ್ಪದ ಅಕ್ರಮ ಬಾಂಗ್ಲಾದೇಶಿಗರಿಗೆ ಜನನ ಪ್ರಮಾಣಪತ್ರಗಳನ್ನು ನೀಡದಂತೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್, ರಾಜಧಾನಿಯ ಎಲ್ಲ ಶಾಲೆಗಳಿಗೆ ಆದೇಶ ನೀಡಿದೆ.
ಅಕ್ರಮ ಬಾಂಗ್ಲಾದೇಶಿ ವಲಸಿಗ ಮಕ್ಕಳನ್ನು ಗುರುತಿಸಲು ವಿಶೇಷ ಕಾರ್ಯಪಡೆ ರಚಿಸುವಂತೆ ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಿರುವ ದೆಹಲಿ ಕಾರ್ಪೊರೇಷನ್, ಅಂತಹ ವ್ಯಕ್ತಿಗಳಿಗೆ ಯಾವುದೇ ರೀತಿಯ ಜನನ ಪ್ರಮಾಣಪತ್ರವನ್ನು ನೀಡದಂತೆ ಕಟ್ಟಪ್ಪಣೆ ಹೊರಡಿಸಿದೆ.
ಅಕ್ರಮ ವಲಸಿಗರ ವಿರುದ್ಧ ಕ್ರಮ: ಡಿಸೆಂಬರ್ 12 ರಂದು ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದಿದ್ದು, ಸಭೆಯಲ್ಲಿ ಈ ನಿರ್ದೇಶನಗಳನ್ನು ಚರ್ಚಿಸಲಾಗಿದೆ. ಹಲವು ಗಂಭೀರ ವಿಚಾರಗಳನ್ನು ಚರ್ಚಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೆಹಲಿಯ ಎಲ್ಲಾ ಶಾಲೆಗಳಿಂದ ಬಾಂಗ್ಲಾದೇಶದ ಮಕ್ಕಳ ಬಗ್ಗೆ ವರದಿಗಳನ್ನು ಕೇಳಲಾಗಿದ್ದು, ಡಿ. 31ರೊಳಗೆ ವರದಿ ಸಲ್ಲಿಸುವಂತೆ ಶಾಲೆಗಳಿಗೆ ತಿಳಿಸಲಾಗಿದೆ.
ರಾಜಧಾನಿ ವ್ಯಾಪ್ತಿಯಲ್ಲಿ ನೆಲಸಿರುವ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಪ್ರವೇಶದ ಸಮಯದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರ ಗುರುತಿನ ಚೀಟಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸುವಂತೆ ಉಪ ಆಯುಕ್ತ (ಪ್ರಧಾನ ಕಚೇರಿ) ಎಂಸಿಡಿ ಬಿಪಿ ಭಾರದ್ವಾಜ್ ಸಭೆಯಲ್ಲಿ ತಿಳಿಸಿದರು.
ಜನನ ಪ್ರಮಾಣಪತ್ರದಲ್ಲಿ ಕಟ್ಟುನಿಟ್ಟಿಗೆ ಆದೇಶ : ಯಾವುದೇ ಸಂದರ್ಭದಲ್ಲೂ ಅಕ್ರಮ ಬಾಂಗ್ಲಾ ವಲಸಿಗರಿಗೆ ಜನನ ಪ್ರಮಾಣಪತ್ರ ನೀಡದಂತೆ ಆದೇಶ ನೀಡಿರುವ ದೆಹಲಿ ಕಾರ್ಪೊರೇಷನ್, ಇದಕ್ಕಾಗಿ ಜನನ ನೋಂದಣಿ ಹಾಗೂ ಜನನ ಪ್ರಮಾಣಪತ್ರ ವಿತರಣೆ ವೇಳೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಜನನ ಪ್ರಮಾಣಪತ್ರ ನೀಡಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ನೋಂದಣಿದಾರರನ್ನು ಗುರುತಿಸುವಂತೆಯೂ ಸೂಚನೆ ನೀಡಲಾಗಿದೆ.
ಮುಂದಿನ ಕ್ರಮ: ಪ್ರತಿ ಶುಕ್ರವಾರ ಮಧ್ಯಾಹ್ನ 3:30ರೊಳಗೆ ಜಿಲ್ಲಾಧಿಕಾರಿ ಅವರಿಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಎಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಇದರೊಂದಿಗೆ ಡಿಸೆಂಬರ್ 31 ರೊಳಗೆ ಅಗತ್ಯ ವರದಿಗಳನ್ನು ಸಲ್ಲಿಸುವಂತೆ ಎಲ್ಲ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಮೋದಿ ವಿಜಯ್ ದಿವಸ್ ಪೋಸ್ಟ್ಗೆ ಬಾಂಗ್ಲಾ ಟೀಕೆ: ಪಾಕಿಸ್ತಾನ ಸಂಕೋಲೆಯಿಂದ ಬಿಡುಗಡೆ ಕೊಡಿಸಿದ ಭಾರತವನ್ನೇ ಮರೆತ ನಾಯಕರು! - BANGLA CRITICISM OF PM MODI X POST