ಕರ್ನಾಟಕ

karnataka

ETV Bharat / bharat

ವಿಮಾನದಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಗಗನಸಖಿಯಿಂದ ಮಾಹಿತಿ: ಎಮರ್ಜೆನ್ಸಿ ಡೋರ್​ ತೆಗೆಯಲು ಮುಂದಾದ ಯುವಕ! - Flight Emergency Door - FLIGHT EMERGENCY DOOR

ವಿಮಾನದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏನು ಮಾಡಬೇಕೆಂದು ಗಗನಸಖಿ ಮಾಹಿತಿ ನೀಡುತ್ತಿರುವಾಗಲೇ ಯುವಕನೋರ್ವ ಎಮರ್ಜೆನ್ಸಿ ಡೋರ್​ ತೆಗೆಯಲು ಯತ್ನಿಸಿದ ಘಟನೆ ಛತ್ತೀಸ್​ಗಢದ ರಾಯ್​ಪುರ ವಿಮಾನ ನಿಲ್ದಾಣದಲ್ಲಿ ಜರುಗಿದೆ.

File image
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Jun 7, 2024, 6:19 PM IST

ರಾಯ್‌ಪುರ(ಛತ್ತೀಸ್​ಗಢ): ವಿಮಾನ ಟೇಕ್​ಆಫ್​ ವೇಳೆ ಪ್ರಯಾಣಿಕನೋರ್ವ ವಿಮಾನದ ಎಮರ್ಜೆನ್ಸಿ ಡೋರ್​ ತೆಗೆಯಲು ಯತ್ನಿಸಿದ ಘಟನೆ ಶುಕ್ರವಾರ ಛತ್ತೀಸ್​ಗಢ ರಾಜಧಾನಿ ರಾಯ್​ಪುರದಲ್ಲಿ ನಡೆದಿದೆ. ಎಮರ್ಜೆನ್ಸಿ ಡೋರ್​ ಓಪನ್​ ಮಾಡುವುದನ್ನು ಗಮನಿಸಿದ ಗಗನಸಖಿ ತಕ್ಷಣವೇ ಎಚ್ಚರಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ (ಸಂಖ್ಯೆ 6E2205) ದೆಹಲಿಗೆ ಹಾರಾಟ ಮಾಡಲು ಸಿದ್ಧವಾಗಿತ್ತು. ವಿಮಾನ ಟೇಕ್​ಆಫ್​ ಆಗುವ ವೇಳೆ ವಿಮಾನದಲ್ಲಿದ್ದ ಯುವಕನೊಬ್ಬ ಎಮರ್ಜೆನ್ಸಿ ಡೋರ್​ ತುರ್ತು ಗೇಟ್ ತೆರೆಯಲು ಯತ್ನಿಸಿದ್ದಾನೆ. ಆಗ ಗಗನಸಖಿ ಕೂಡಲೇ ಆತನನ್ನು ತಡೆದಿದ್ದಾರೆ. ಯುವಕನನ್ನು ರಾಯ್‌ಪುರ ವಿಮಾನ ನಿಲ್ದಾಣದಲ್ಲೇ ಇಳಿಸಲಾಗಿದೆ. ಸ್ಥಳೀಯ ಪೊಲೀಸರಿಗೆ ವಶಕ್ಕೆ ಒಪ್ಪಿಸಲಾಗಿದೆ. ಈ ಘಟನೆಯನ್ನು ವಿಮಾನ ನಿಲ್ದಾಣದ ನಿರ್ದೇಶಕ ಎಸ್‌.ಡಿ.ಶರ್ಮಾ 'ಈಟಿವಿ ಭಾರತ್​'ಗೆ ಖಚಿತಪಡಿಸಿದ್ದಾರೆ.

ನಡೆದಿದ್ದೇನು?:ವಿಮಾನವು ಹಾರಾಟಕ್ಕೆ ಸಿದ್ಧವಾಗಿದ್ದಾಗ ಗಗನಸಖಿ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದರು. ವಿಮಾನದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಏನು ಮಾಡಬೇಕು ಹಾಗೂ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದರು. ಇದೇ ಸಂದರ್ಭದಲ್ಲಿ ಯುವಕ ಎಮರ್ಜೆನ್ಸಿ ಡೋರ್​ ತೆಗೆಯಲು ಮುಂದಾಗಿದ್ದ. ಆದರೆ, ಆತನಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಗಗನಸಖಿ ತಕ್ಷಣವೇ ಆತನನ್ನು ತಡೆದಿದ್ದಾರೆ.

ಇದಾದ ನಂತರ ಯುವಕನನ್ನು ವಿಮಾನದಿಂದ ಕೆಳಗಿಳಿಸಲಾಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತಾನು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಯುವಕ ಹೇಳಿಕೊಂಡಿದ್ದಾನೆ. ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದೆ. ಪೊಲೀಸ್​ ವಿಚಾರಣೆ ಪೂರ್ಣಗೊಂಡ ಬಳಿಕ ಆ ಯುವಕನನ್ನು ಮತ್ತೊಂದು ವಿಮಾನದಲ್ಲಿ ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಎಸ್‌.ಡಿ.ಶರ್ಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಿಮಾನಯಾನಿಗಳಲ್ಲಿ ಆತಂಕ ಸೃಷ್ಟಿಸಿದ ಸಿಂಗಾಪುರ ವಿಮಾನದ ಘಟನೆ: ಆಗಸದಲ್ಲಿ ನಡೆದಿದ್ದೇನು?, ಇದಕ್ಕೆ ಕಾರಣ ಗೊತ್ತಾ?

ABOUT THE AUTHOR

...view details