ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮೂರು ವಾರಗಳ ನಂತರ ಇಂದು ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಫಡ್ನವೀಸ್ ಅವರ ಸ್ವಕ್ಷೇತ್ರವಾದ ನಾಗ್ಪುರದಲ್ಲಿ ಇಂದು (ಭಾನುವಾರ) ನಡೆದ ಭವ್ಯ ಕಾರ್ಯಕ್ರಮದಲ್ಲಿ ಮೂವತ್ತೊಂಬತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರದ ಸಚಿವ ಸಂಪುಟದಲ್ಲಿ ಗರಿಷ್ಠ 43 ಮಂತ್ರಿಗಳನ್ನು ನೇಮಿಸಬಹುದಾಗಿದೆ. ಪ್ರಸ್ತುತ ಬಿಜೆಪಿಯಿಂದ 19, ಶಿವಸೇನೆಯಿಂದ 11 ಮತ್ತು ಎನ್ಸಿಪಿಯಿಂದ 9 ಸಚಿವರು ಆಯ್ಕೆಯಾಗಿದ್ದು, ಫಡ್ನವೀಸ್ ಮತ್ತು ಅವರ ಸಹಾಯಕರನ್ನು ಸೇರಿಸಿ 42 ಸ್ಥಾನಗಳು ಈಗ ಭರ್ತಿಯಾಗಿವೆ. ನಾಗ್ಪುರದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಂಧೆ ಮತ್ತು ಪವಾರ್ ಅವರೊಂದಿಗೆ ಫಡ್ನವೀಸ್ ಭಾಗವಹಿಸಿದ್ದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ, ಆಶಿಶ್ ಶೆಲಾರ್, ಗಣೇಶ್ ನಾಯಕ್, ಮಂಗಲ್ ಪ್ರಭಾತ್ ಲೋಧಾ, ಪಂಕಜಾ ಮುಂಡೆ, ಗಿರೀಶ್ ಮಹಾಜನ್, ರಾಧಾಕೃಷ್ಣ ವಿಖೆ ಪಾಟೀಲ್, ಚಂದ್ರಕಾಂತ್ ಪಾಟೀಲ್ ಮತ್ತು ನಿತೇಶ್ ರಾಣೆ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಪ್ರತಿನಿಧಿಸುವ ಶಿವಸೇನೆ ಮುಖಂಡರಾದ ಶಂಭುರಾಜ್ ದೇಸಾಯಿ, ದಾದಾಜಿ ದಗಡು ಭೂಸೆ, ಸಂಜಯ್ ರಾಥೋಡ್, ಉದಯ್ ಸಮಂತ್, ಗುಲಾಬ್ ರಾವ್ ಪಾಟೀಲ್ ಮತ್ತು ಸಂಜಯ್ ಶಿರ್ಸಾಟ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎನ್ಸಿಪಿ ನಾಯಕರಾದ ಅದಿತಿ ತಟ್ಕರೆ, ಧನಂಜಯ್ ಮುಂಡೆ ಮತ್ತು ಹಸನ್ ಮುಶ್ರಿಫ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.