ಕರ್ನಾಟಕ

karnataka

ETV Bharat / bharat

ಸಂಸತ್ತಿನ ಚಳಿಗಾಲದ ಅಧಿವೇಶನ: 3ನೇ ದಿನವೂ ಮುಂದುವರೆದ ಗದ್ದಲ; ನಾಳೆಗೆ ಉಭಯ ಸದನ ಮುಂದೂಡಿಕೆ - PARLIAMENT WINTER SESSION

ಚರ್ಚೆಗೆ ಅವಕಾಶ ನೀಡಬೇಕು ಎಂಬ ಪ್ರತಿಪಕ್ಷಗಳ ಮನವಿಗೆ ಅವಕಾಶ ದೊರೆಯದ ಕಾರಣ ಮತ್ತೆ ಸದನದಲ್ಲಿ ಕೋಲಾಹಲ ಉಂಟಾಗಿ ನಾಳೆಗೆ ಸದನವನ್ನು ಮುಂದೂಡಲಾಯಿತು.

rs-proceedings-adjourned-for-day-amid-opposition-uproar-over-adani-sambhal-issues
ರಾಜ್ಯಸಭೆ (ಸಂಸದ್‌ ಟಿವಿ)

By PTI

Published : Nov 28, 2024, 2:09 PM IST

Updated : Nov 28, 2024, 2:31 PM IST

ನವದೆಹಲಿ:ಸಂಸತ್ತಿನ ಚಳಿಗಾಲದ​​ ಅಧಿವೇಶನದ ಮೂರನೇ ದಿನವಾದ ಇಂದೂ ಕೂಡ ಉಭಯ ಸದನಗಳಲ್ಲಿ ಗದ್ದಲ, ಪ್ರತಿಭಟನೆಗಳು ಮುಂದುವರೆದವು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅದಾನಿ, ಮಣಿಪುರ ಹಿಂಸಾಚಾರ ಮತ್ತು ಸಂಭಾಲ್ ಹಿಂಸಾಚಾರ ವಿಚಾರಗಳ ಕುರಿತು ಪ್ರತಿಪಕ್ಷಗಳ ಸಂಸದರು ಚರ್ಚೆಗೆ ಒತ್ತಾಯಿಸಿದರು.

ಬೆಳಗ್ಗೆ 11 ಗಂಟೆಗೆ ರಾಜ್ಯಸಭೆ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು. ಸಭಾಪತಿ ಜಗದೀಪ್ ಧಂಖರ್​ ಸದನದಲ್ಲಿ ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಕಲಾಪಕ್ಕೆ ಅಡ್ಡಿ ಉಂಟುಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನು ದುರ್ಬಲಗೊಳಿಸುತ್ತದೆ. ಸದನದಲ್ಲಿ ಆರೋಗ್ಯಕರ ಚರ್ಚೆ ಅಗತ್ಯ. ಅಡ್ಡಿಪಡಿಸುವುದು ಅಲ್ಲ ಎಂದರು. ಆದರೂ ಪ್ರತಿಭಟನೆ ಘೋಷಣೆಗಳು ಮುಂದುವರೆದವು. ಹೀಗಾಗಿ, ಮಧ್ಯಾಹ್ನ 12ಕ್ಕೆ ಸದನವನ್ನು ಮುಂದೂಡಲಾಯಿತು.

ಮತ್ತೆ ಸದನ ಆರಂಭವಾಗುತ್ತಿದ್ದಂತೆ, ಅದಾನಿ ವಿಚಾರದಲ್ಲಿ ಚರ್ಚೆಗೆ ನೋಟಿಸ್ ನೀಡಿದ್ದ ಕಾಂಗ್ರೆಸ್‌ನ ಪ್ರಮೋದ್ ತಿವಾರಿ, ತಮ್ಮ ನೋಟಿಸ್ ತಿರಸ್ಕರಿಸಿದ್ದಕ್ಕೆ ಪಾಯಿಂಟ್ ಆಫ್ ಆರ್ಡರ್ ಎತ್ತಿದರು. ಈ ವೇಳೆ ಚರ್ಚೆಗೆ ಅವಕಾಶ ನೀಡಬೇಕು ಎಂಬ ಪ್ರತಿಪಕ್ಷಗಳ ಮನವಿಗೆ ಅವಕಾಶ ದೊರೆಯದ ಕಾರಣ ಮತ್ತೆ ಸದನದಲ್ಲಿ ಕೋಲಾಹಲ ನಡೆದು ಅಂತಿಮವಾಗಿ ನಾಳೆಗೆ ಸದನವನ್ನು ಮುಂದೂಡಲಾಯಿತು.

ಲೋಕಸಭೆಯಲ್ಲೂ ಅದಾನಿ ಮತ್ತು ಸಂಭಾಲ ಹಿಂಸಾಚಾರದಲ್ಲಿ ಭಾಗಿಯಾದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಪಕ್ಷಗಳ ಪ್ರತಿಭಟನೆಯ ನಡೆ ಮತ್ತು ಸದನಕ್ಕೆ ಅಡ್ಡಿ ಮಾಡುತ್ತಿರುವುದನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್​ ರಿಜಿಜು ಖಂಡಿಸಿದರು.

ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದ ಜಂಟಿ ಸಮಿತಿಯ ಅವಧಿ ವಿಸ್ತರಣೆ ಹಾಗೂ ಕೆಲವು ವಿಷಯಗಳ ಕುರಿತು ಸದನದಲ್ಲಿ ಚರ್ಚೆ ನಡೆಸಬೇಕು ಎಂಬ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದ ಬಳಿಕವೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು.

ಇದಕ್ಕೂ ಮುನ್ನ ಸಭೆ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್​​ನ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರವೀಂದ್ರ ಚವಾಣ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಆರಂಭವಾದ ಪ್ರಶ್ನೋತ್ತರ ಕಲಾಪದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ 12ರವರೆಗೆ ಸಭೆ ಮುಂದೂಡಲಾಯಿತು. ಸಭೆ ಮರು ಸೇರಿದ ಬಳಿಕವೂ ಪ್ರತಿಭಟನೆ ಮುಂದುವರೆದ ಹಿನ್ನೆಲೆಯಲ್ಲಿ ಕಲಾಪದ ಅಧ್ಯಕ್ಷತೆ ವಹಿಸಿದ್ದ ಟಿಡಿಪಿ ಸದಸ್ಯ ಕೃಷ್ಣಪ್ರಸಾದ್‌ ತೆನ್ನೆಟಿ ನಾಳೆಗೆ ಕಲಾಪ ಮುಂದೂಡಿದರು.

ಇದನ್ನೂ ಓದಿ: ಸಂಸತ್​ನಲ್ಲಿ ಸಂವಿಧಾನದ ಪ್ರತಿ ಪ್ರದರ್ಶನ; ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ

Last Updated : Nov 28, 2024, 2:31 PM IST

ABOUT THE AUTHOR

...view details