2024ನೇ ಸಾಲಿನ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ಭಾರತದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ, ನಮ್ಮ ಪ್ರಜಾಪ್ರಭುತ್ವ ಬಲಪಡಿಸಲು ನಾವೆಲ್ಲರೂ ನಮ್ಮ ಮತವನ್ನು ತಪ್ಪದೆ ಚಲಾಯಿಸಬೇಕಿದೆ. ಏಳು ಹಂತಗಳಲ್ಲಿ ನಡೆಯುವ ಮತದಾನದ ದಿನಾಂಕವನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದೆ.
ನಿಮ್ಮ ಕ್ಷೇತ್ರ ಹಾಗೂ ದೇಶದ ಸರಿಯಾದ ನಾಯಕನನ್ನು ಆಯ್ಕೆ ಮಾಡಲು ಅಗತ್ಯವಿರುವ ಎಲ್ಲ ದಾಖಲೆಗಳೊಂದಿಗೆ ನೀವು ಮತ ಚಲಾಯಿಸಲು ಸಜ್ಜಾಗಿದ್ದೀರಾ? ಸರಿ, ಹಾಗಾದರೆ ಈ e-EPIC ಕಾರ್ಡ್ ಬಗ್ಗೆ ನಿಮಗೆ ತಿಳಿದಿದೆಯಾ? ಚುನಾವಣಾ ಆಯೋಗವು ಮತದಾರರ ಅನುಕೂಕ್ಕಾಗಿ e- EPIC ಕಾರ್ಡ್ ವ್ಯವಸ್ಥೆಯನ್ನು ಮಾಡಿದೆ. ಇದು ಮತದಾರರ ಗುರತಿನ ಚೀಟಿಯ ಡಿಜಿಟಲ್ ಆವೃತ್ತಿಯಾಗಿದೆ. ಚುನಾವಣಾ ಆಯೋಗದ ಪ್ರಕಾರ ಈ ಕಾರ್ಡ್ ಹೊಂದಿದ್ದಲ್ಲಿ ಮತ ಚಲಾಯಿಸುವುದು ಸುಲಭ.
ಏನಿದು e-EPIC ಕಾರ್ಡ್?:e-EPIC ಎಂಬುದು EPIC ನ ಸುರಕ್ಷಿತ ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ ಅಂದರೆ PDF ಆವೃತ್ತಿ. PDF ನಲ್ಲಿರುವ ಅದನ್ನು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿಯೇ ಮುದ್ರಿಸಬಹುದಾದ ರೂಪದಲ್ಲಿ ಡೌನ್‌ಲೋಡ್ ಮಾಡಬಹುದು. ಹಾಗಾದರೆ EPIC ಎಂದರೇನು? ಭಾರತೀಯ ಚುನಾವಣಾ ಆಯೋಗದಿಂದ ಕೊಡಲ್ಪಡುವ ಮತದಾರರ ಫೋಟೋ ಗುರುತಿನ ಚೀಟಿ (Electors Photo Identity Card). ಹೀಗೆ ಮತದಾರರು ತಮ್ಮ ಮೊಬೈಲ್ನಲ್ಲಿಯೇ ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟುಕೊಳ್ಳಬಹುದು. ಡಿಜಿ ಲಾಕರ್ನಲ್ಲಿ ಪಿಡಿಎಫ್ ಆಗಿ ಅಪ್ಲೋಡ್ ಮಾಡಬಹುದು. ಅಥವಾ ಅದನ್ನು ಮುದ್ರಿಸಬಹುದು ಮತ್ತು ಅದನ್ನು ಸ್ವಯಂ ಲ್ಯಾಮಿನೇಟ್ ಮಾಡಿಟ್ಟುಕೊಳ್ಳಬಹುದು.
e-EPIC ಪಡೆಯಲು ಯಾರು ಅರ್ಹರು?:ಭಾರತೀಯ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿರುವ EPIC ನಂಬರ್ ಹೊಂದಿರುವ ಎಲ್ಲ ಸಾಮಾನ್ಯ ಮತದಾರರು e- EPIC ಗೆ ಅರ್ಹರಾಗಿರುತ್ತಾರೆ. EPIC ಸಂಖ್ಯೆ ಹೊದಿರುವವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು http://voterportal.eci.gov.in/ ಅಥವಾ http://electoralsearch.in/ ಮೂಲಕ ಹುಡುಕಬಹುದು. ಹಾಗೂ e- EPIC ಕಾರ್ಡ್ ಅನ್ನೂ ಪಡೆಯಬಹುದು.