ವಯನಾಡು (ಕೇರಳ): ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಇದೇ ವೇಳೆ ಅವರು ಚುನಾವಣಾ ಆಯೋಗಕ್ಕೆ ಅವರು ತಮ್ಮ ಆಸ್ತಿ ವಿವರವನ್ನೂ ಸಲ್ಲಿಕೆ ಮಾಡಿದ್ದಾರೆ. 20 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ರಾಹುಲ್ ಗಾಂಧಿ ಘೋಷಿಸಿಕೊಂಡಿದ್ದಾರೆ.
ಚುನಾವಣಾಧಿಕಾರಿಗೆ ಸಲ್ಲಿಸಿದ ಆಸ್ತಿ ವಿವರದ ಅಫಿಡವಿಟ್ ಪ್ರಕಾರ, ರಾಹುಲ್ ಗಾಂಧಿ 9 ಕೋಟಿ ರೂ.ಗೂ ಹೆಚ್ಚು ಚರಾಸ್ತಿ ( 9,24,59,264 ರೂ.) ಮತ್ತು 11 ಕೋಟಿ ರೂ.ಗೂ ಹೆಚ್ಚು ( 11,15,02,598 ರೂ) ಸ್ಥಿರಾಸ್ತಿ ಹೊಂದಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಬಳಿ 20 ಕೋಟಿ ಆಸ್ತಿ ಇದೆ ಎಂದು ಹೇಳಿದ್ದಾರೆ.
ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹ ಮಾಲೀಕತ್ವದಲ್ಲಿ ಭೂಮಿ ಹೊಂದಿದ್ದೇನೆ ಎಂದು ಆಸ್ತಿ ವಿವರದಲ್ಲಿ ಘೋಷಿಸಿದ್ದಾರೆ. ಅಫಿಡವಿಟ್ ಪ್ರಕಾರ ಅವರ ಆದಾಯದ ಮೂಲವು ಸಂಸದರ ಸಂಬಳ, ರಾಯಧನ, ಬಾಡಿಗೆ, ಬಡ್ಡಿ, ಬಾಂಡ್‌ಗಳು, ಡಿವಿಡೆಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಹಾಗೂ ಇತರ ಆದಾಯಗಳಿಂದ ಬರುವ ಬಂಡವಾಳದ ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ.
2022 - 23ನೇ ಸಾಲಿನಲ್ಲಿ ಒಟ್ಟು ಆದಾಯ 1,02,78,680 ರೂಗಳೆಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. 1994 ರಲ್ಲಿ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು 1995 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ (ಅಭಿವೃದ್ಧಿ ಅಧ್ಯಯನ) ಪೂರ್ಣಗೊಳಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ.