ಚೆನ್ನೈ (ತಮಿಳುನಾಡು):ಮಹಿಳೆಯರು ಸೌಂದರ್ಯ ವರ್ಧಕಗಳನ್ನು ಬಳಸುವುದು ಸಹಜ. ಅವೇ ಕೆಲವೊಮ್ಮೆ ಇಬ್ಬರ ಮಧ್ಯೆ ಮತ್ಸರಕ್ಕೂ ಕಾರಣವಾಗುತ್ತವೆ. ತುಟಿಗಳ ಅಂದ ಹೆಚ್ಚಿಸುವ 'ಲಿಪ್‌ಸ್ಟಿಕ್' ಚೆನ್ನೈ ಮೇಯರ್ ಮತ್ತು ಆಕೆಯ ದಫೇದಾರ್ ನಡುವೆ ಮುನಿಸಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೊಂದು ವಿವಾದ ಸ್ವರೂಪ ಪಡೆದು ಮಾಧ್ಯಮಗಳಲ್ಲಿ ವರದಿಯೂ ಆಗಿದೆ.
ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಪ್ರಿಯಾ ಅವರ ದಫೇದಾರ್ ಆಗಿರುವ ಮಾಧವಿ ಎಂಬಾಕೆಯನ್ನು ವರ್ಗಾವಣೆ ಮಾಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಮೇಯರ್ ಹಚ್ಚುವ ಲಿಪ್‌ಸ್ಟಿಕ್ ಬಣ್ಣವನ್ನ ತಾನು ಬಳಸಿದ್ದಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂದು ವರ್ಗಗೊಂಡ ಮಹಿಳಾ ದಫೇದಾರ್ ಆರೋಪಿಸಿದ್ದಾರೆ. ಆದರೆ, ಇದನ್ನು ಮೇಯರ್ ಕಚೇರಿ ನಿರಾಕರಿಸಿದೆ.
ಏನಿದು ಆರೋಪ?:ಚೆನ್ನೈ ಮೇಯರ್ ಪ್ರಿಯಾ ಅವರ ಮಹಿಳಾ ದಫೇದಾರ್ ಆಗಿ ಕೆಲಸ ಮಾಡುತ್ತಿದ್ದ ಮಾಧವಿ (50) ಎಂಬಾಕೆಯನ್ನು ಕಳೆದ ತಿಂಗಳು ಮನಾಲಿ ಪ್ರಾದೇಶಿಕ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶದಲ್ಲಿ ಕರ್ತವ್ಯಲೋಪ, ನಿರ್ಲಕ್ಷ್ಯದ ಕಾರಣ ನೀಡಲಾಗಿದೆ. ಆದರೆ, ಮಾಧವಿ ಅವರ ವಾದವೇ ಬೇರೆಯಾಗಿದೆ. ತನ್ನನ್ನು ಮೇಯರ್ ಅವರು ವೈಯಕ್ತಿಕ ಕಾರಣಕ್ಕಾಗಿ ಟ್ರಾನ್ಸ್ಫರ್ ಮಾಡಿದ್ದಾರೆ ಎಂದು ದೂರಿದ್ದಾರೆ.
ಒಂದೇ ಬಣ್ಣದ ಲಿಪ್‌ಸ್ಟಿಕ್ ಕಾರಣ:ವರ್ಗಗೊಂಡ ಮಾಧವಿ ಆರೋಪಿಸುವಂತೆ, ಮೇಯರ್ ಪ್ರಿಯಾ ಅವರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚುತ್ತಿದ್ದರು. ಇಂಥದ್ದೇ ಬಣ್ಣವನ್ನು ನಾನೂ ಬಳಸುತ್ತಿದೆ. ಇದು ಮೇಯರ್ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಈ ಬಗ್ಗೆ ಅವರ ಆಪ್ತ ಸಹಾಯಕನ ಬಳಿ ಹೇಳಿಕೊಂಡಿದ್ದರು. ಇನ್ನು ಮುಂದೆ ಲಿಪ್‌ಸ್ಟಿಕ್ ಧರಿಸಬಾರದು ಎಂದು ಆತ ಸೂಚನೆ ನೀಡಿದ್ದ. ಲಿಪ್‌ಸ್ಟಿಕ್ ಹಚ್ಚುವುದು ನನ್ನ ವೈಯಕ್ತಿಕ ಆಯ್ಕೆ ಎಂದು ಆಪ್ತ ಸಹಾಯಕನಿಗೆ ಹೇಳಿದ್ದೆ ಎಂದು ಅವರು ಹೇಳಿದರು.