ಕೋಝಿಕ್ಕೋಡ್ (ಕೇರಳ): ಅಪಸ್ಮಾರ ರೋಗದಿಂದ ಬಳಲುತ್ತಿದ್ದ ಯುವತಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ವೈದ್ಯರು ತಲೆಬುರುಡೆಗೆ ರಂಧ್ರ ಕೊರೆದು ಯಶಸ್ವಿ ಶಸ್ತ್ರಚಿಕಿತ್ಸೆ(open skull surgery) ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿಗೆ ಎಲೆಕ್ಟ್ರೋಕಾರ್ಟಿಕೊಗ್ರಾಫ್ (ಇಸಿಒಜಿ) ಅನ್ನು ಜೋಡಿಸಿದ್ದಾರೆ.
ವೈದ್ಯರ ಪ್ರತಿಕ್ರಿಯೆ ಹೀಗಿದೆ; ಹಲವು ವರ್ಷಗಳಿಂದ ಅಪಸ್ಮಾರ (ಮೂರ್ಛೆ) ರೋಗದಿಂದ ಬಳಲುತ್ತಿದ್ದ 25 ವರ್ಷದ ಯುವತಿಯೊಬ್ಬರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಕೇರಳ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲು ಎಂದು ವೈದ್ಯರು ತಿಳಿಸಿದ್ದಾರೆ.
ಯುವತಿಗೆ ಮೊದಲು ಇಇಜಿ, ಎಂಆರ್ಐ, ಪಿಇಟಿ ಸ್ಕ್ಯಾನ್ ಮತ್ತು ನ್ಯೂರೋಸೈಕೋಲಾಜಿಕಲ್ ಪರೀಕ್ಷೆಗಳನ್ನು ನಡೆಸಲಾಯಿತು. ಅಪಸ್ಮಾರ ರೋಗದ ಕೇಂದ್ರಬಿಂದು ಮೆದುಳಿನಲ್ಲಿ ಇದೆ ಎಂದು ದೃಢಪಟ್ಟರೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಿದರೆ ಅದು ಕಣ್ಣುಗಳು ಸೇರಿದಂತೆ ದೇಹದ ಯಾವುದೇ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ತಿಳಿದುಕೊಳ್ಳುವುದು ಸಹ ಅಗತ್ಯ ಎಂದು ವೈದ್ಯಕೀಯ ಕಾಲೇಜಿನ ನರಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ವಿ. ಎಂ. ಪವಿತ್ರನ್'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.