ಹರಿದ್ವಾರ: ಗಾಳಿಪಟಕ್ಕೆ ಬಳಕೆ ಮಾಡುವ ಚೀನಾದ ಮಾಂಜ ದಾರ ಬಳಕೆಗೆ ನಿರ್ಬಂಧ ವಿಧಿಸಲಾಗಿದೆಯಾದರೂ, ಮಾರುಕಟ್ಟೆಗಳಲ್ಲಿ ಈ ದಾರವನ್ನು ಕೆಲವರು ಮಾರಾಟ ಮಾಡುತ್ತಿರುವುದು ಕಂಡುಬರುತ್ತದೆ. ಇದೀಗ ಈ ದಾರದಿಂದ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮುಜಾಫರ್ ನಗರದ ಅಶೋಕ್ ಕುಮಾರ್ ಎಂಬುವರು ಚೀನಾದ ಈ ದಾರಕ್ಕೆ ಬಲಿಯಾಗಿದ್ದಾರೆ.
ಹರಿದ್ವಾರದಲ್ಲಿ ನಮಾಮಿ ಗಂಗೆ ಯೋಜನೆಯಲ್ಲಿ ಡ್ರೈವರ್ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಇಂದು ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಇವರ ಕುತ್ತಿಗೆಗೆ ಚೀನಾದ ಮಾಂಜ ದಾರ ಅವರ ಕುತ್ತಿಗೆಗೆ ಸಿಲುಕಿದ್ದರಿಂದ ಸ್ಥಳದಲ್ಲಿಯೇ ಅಶೋಕ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಮಾಹಿತಿ ಪಡೆದ ಕಂಖಲ್ ಪೊಲೀಸ್ ಠಾಣೆ ಅಧಿಕಾರಿಗಳು ತಕ್ಷಣಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದ್ರೆ ಕತ್ತಿನ ಬಾಗದಲ್ಲಿ ಗಂಭೀರ ಗಾಯವಾದ ಪರಿಣಾಮ, ಹೆಚ್ಚಿನ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದರು.
ಹರಿದ್ವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬಂದ ಬಳಿಕ ಕುಟುಂಬಸ್ಥರಿಗೆ ಮೃತ ದೇಹವನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜನರಿಗೆ ಮನವಿ ಮಾಡಿದ ನಗರ ಎಸ್ಪಿ: ಚೀನಾದ ಮಾಂಜ ದಾರವನ್ನು ಬಳಕೆ ಮಾಡದಂತೆ ನಿರ್ಬಂಧವಿದೆ. ಈ ಸಂಬಂಧ ಆಗಿಂದಾಗ್ಗೆ ನಾವು ಪ್ರಚಾರ ನಡೆಸಿ ಈ ಕುರಿತು ಮಾಹಿತಿ ನೀಡುತ್ತಿದ್ದೇವೆ. ಜನರಿಗೆ ಈ ದಾರವನ್ನು ಬಳಕೆ ಮಾಡದಂತೆ ಮತ್ತೊಮ್ಮೆ ಪ್ರಚಾರ ನಡೆಸಲಾಗುವುದು. ಈ ಚೀನಾದ ಮಾಂಜ ದಾರವನ್ನು ಎಲ್ಲಿಯಾದರೂ ಮಾರಾಟ ಮಾಡುತ್ತಿದ್ದರೆ, ತಕ್ಷಣಕ್ಕೆ ಮಾಹಿತಿ ನೀಡುವಂತೆ ಜನರಿಗೆ ಹರಿದ್ವಾರ ಎಸ್ಪಿ ಪಂಕಜ್ ಗೈರೊಲಾ ಮನವಿ ಮಾಡಿದ್ದಾರೆ.