ಚಿಕ್ಕೋಡಿ (ಬೆಳಗಾವಿ) : ಮದ್ಯಪಾನ ಸೇವನೆಗೆ ಹೆಂಡತಿಗೆ ಆಗಾಗ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಗಂಡನನ್ನು ಪತ್ನಿಯೇ ಎರಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ (50) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಕಳೆದ ಡಿಸೆಂಬರ್ 10 ರಂದು ಈ ಘಟನೆ ನಡೆದಿದೆ. ಆರೋಪಿಯಾದ ಸಾವಿತ್ರಿ ಇಟ್ನಾಳೆ(30)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿರುವ ಎಸ್ಪಿ, ಡಿಸೆಂಬರ್ 10 ರಂದು ಈ ಘಟನೆ ನಡೆದಿದೆ. ಈಗಾಗಲೇ ನಾವು ಆರೋಪಿಯ ದಸ್ತಗಿರಿ ಮಾಡಿದ್ದೇವೆ. ಕೊಲೆಯಾದ ವ್ಯಕ್ತಿ ದಿನನಿತ್ಯ ಕುಡಿತದ ಚಟಕ್ಕೆ ಒಳಗಾಗಿದ್ದರು. ಮನೆಯಲ್ಲಿ ಕುಡಿತದ ಸಲುವಾಗಿ ಹಣಕ್ಕೋಸ್ಕರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಆರೋಪಿ ಸಾವಿತ್ರಿಗೆ ನಿವೇಶನ ಮಾರಿ ಹಣ ಕೊಡುವಂತೆ ಶ್ರೀಮಂತ್ ಪೀಡಿಸುತ್ತಿದ್ದ. ಗಂಡನ ಕಿರುಕುಳ ತಾಳಲಾರದೇ ಮನೆಯ ಎದುರು ಕಟ್ಟೆಯ ಮೇಲೆ ಮಲಗಿದ್ದ ಶ್ರೀಮಂತನ ಕುತ್ತಿಗೆ ಹಿಸುಕಿ, ಪ್ರಜ್ಞೆ ತಪ್ಪಿಸಿ ನಂತರ ಅವನ ದೇಹವನ್ನು ಆಯುಧದಿಂದ ಎರಡು ತುಂಡುಗಳನ್ನು ಮಾಡಿ ಕೊಲೆ ಮಾಡಿರುತ್ತಾಳೆ ಎಂದು ತಿಳಿಸಿದ್ದಾರೆ.
ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಅಂತಾ ಗಂಡನ ದೇಹವನ್ನ ಎರಡು ಭಾಗವಾಗಿ ತುಂಡರಿಸಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗಿ ಕೃಷಿ ಜಮೀನಿನಲ್ಲಿ ಎಸೆದಿರುತ್ತಾಳೆ. ನಂತರ ಪಕ್ಕದ ತೋಟದವರು ಶವವನ್ನು ನೋಡಿ ಪೊಲೀಸ್ ಠಾಣೆಗೆ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಲವು ಆಯಾಮಗಳಲ್ಲಿ ನೋಡಿದಾಗ ನಮಗೆ ಕೊಲೆ ಆರೋಪಿ ಯಾರು ಎಂಬುದು ಪತ್ತೆಹಚ್ಚಲು ಸಾಧ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ 12 ರಂದು ಪ್ರಕರಣ ದಾಖಲಾಗಿದೆ. ಕುಡಿತದ ಚಟಕ್ಕೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕಾರಣಕ್ಕೆ ಗಂಡನನ್ನೇ ಹೆಂಡತಿ ಕೊಲೆ ಮಾಡಿದ್ದಾಳೆ ಎಂದು ಎಸ್ಪಿ ತಿಳಿಸಿದರು.
ಇದನ್ನೂ ಓದಿ : ಮಂಗಳೂರು: ಮದ್ಯ ಸೇವಿಸಿ ಹಿಂಸಿಸುತ್ತಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಂದ ಪತ್ನಿ - ಪತಿ ಕೊಂದ ಪತ್ನಿ