ತಿರುವನಂತಪುರಂ: ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಡಿಜಿಪಿ ಆರ್.ಶ್ರೀಲೇಖಾ ಅವರು ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಾನು ಮೂರು ವಾರಗಳ ಹಿಂದೆ ಬಿಜೆಪಿ ಸೇರಲು ನಿರ್ಧರಿಸಿದೆ. ಪ್ರಧಾನಿ ಮೋದಿಯವರ ಕಾರಣದಿಂದ ಪಕ್ಷಕ್ಕೆ ಸೇರಿದ್ದೇನೆ. ಜನರ ಸೇವೆಗೆ ಸಹಾಯ ಮಾಡುವ ಸಾಧನವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ" ಎಂದು ಹೇಳಿದರು.
ಶ್ರೀಲೇಖಾ ಅವರಿಗೆ ಶಾಲು ಹೊದಿಸಿ ಪುಷ್ಪಗುಚ್ಛ ನೀಡಿದ ಕೆ.ಸುರೇಂದ್ರನ್, "ಶ್ರೀಲೇಖಾ ಅವರು ಕೇರಳದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ತುಂಬಾ ಧೈರ್ಯಶಾಲಿ ಪೊಲೀಸ್ ಅಧಿಕಾರಿಯಾಗಿ ಹೆಸರು ಗಳಿಸಿದ್ದಾರೆ" ಎಂದರು.
"ಶ್ರೀಲೇಖಾ ಯಾವಾಗಲೂ ತಮ್ಮ ಸಿದ್ಧಾಂತಗಳೊಂದಿಗೆ ದೃಢವಾಗಿ ನಿಂತಿದ್ದಾರೆ. ನವರಾತ್ರಿಯ ಮುನ್ನಾದಿನದಂದು ಅವರು ಪಕ್ಷಕ್ಕೆ ಸೇರಿದ್ದು ನಮಗೆ ಸಂತಸವಾಗಿದೆ. ಅವರನ್ನು ಬಿಜೆಪಿಗೆ ಸ್ವಾಗತಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಬಿಜೆಪಿಗೆ ಸೇರಲಿದ್ದಾರೆ" ಎಂದು ಸುರೇಂದ್ರನ್ ತಿಳಿಸಿದರು.
ಶ್ರೀಲೇಖಾ ಅವರು ಬಿಜೆಪಿ ಸೇರಿದ ಮೂರನೇ ಡಿಜಿಪಿಯಾಗಿದ್ದಾರೆ. 2017ರಲ್ಲಿ ನಿವೃತ್ತರಾದ ಟಿ.ಪಿ.ಸೆನ್ಕುಮಾರ್ ಮತ್ತು ತ್ರಿಶೂರ್ ಜಿಲ್ಲೆಯ ಚಲಕುಡ್ಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಜಾಕೋಬ್ ಥಾಮಸ್ ಈ ಹಿಂದೆ ಬಿಜೆಪಿಗೆ ಸೇರಿದ ನಿವೃತ್ತ ಡಿಜಿಪಿಗಳಾಗಿದ್ದಾರೆ.
ಶ್ರೀಲೇಖಾ ಬರಹಗಾರ್ತಿಯೂ ಆಗಿದ್ದು, ಕವನ ಸಂಕಲನ ಮತ್ತು ಕ್ರೈಮ್ ಥ್ರಿಲ್ಲರ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶ್ರೀಲೇಖಾ 33 ವರ್ಷಗಳ ವೃತ್ತಿಜೀವನದ ನಂತರ ಮಾರ್ಚ್ 2023ರಲ್ಲಿ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಮಹಾನಿರ್ದೇಶಕರಾಗಿ ನಿವೃತ್ತರಾದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ 1987ರಲ್ಲಿ ಐಪಿಎಸ್ ಸೇರಿದ್ದರು.
ಪೊಲೀಸ್ ಇಲಾಖೆಯಲ್ಲಿದ್ದಾಗ ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸಿದ್ದು, ಸಿಬಿಐನಲ್ಲಿಯೂ ಕೆಲಸ ಮಾಡಿದ್ದಾರೆ. ಸಾರಿಗೆ ಆಯುಕ್ತರಾಗಿ ಸೇವೆ ಸಲ್ಲಿಸಿದ ಅವರು ಸಂಚಾರ ಶಿಸ್ತನ್ನು ಜಾರಿಗೊಳಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಇವರು ಕೈಗೊಂಡ ಕ್ರಮಗಳಿಂದ ರಸ್ತೆ ಅಪಘಾತಗಳು ಕಡಿಮೆಯಾಗಿದ್ದವು ಮತ್ತು ಮೋಟಾರು ವಾಹನ ಇಲಾಖೆಯ ಆದಾಯವು ಹೊಸ ಎತ್ತರಕ್ಕೆ ತಲುಪಿತ್ತು. ತಾವು ನಿವೃತ್ತಿಯಾದಾಗ ಯಾವುದೇ ಬೀಳ್ಕೊಡುಗೆ ಸಮಾರಂಭ ಏರ್ಪಡಿಸದಂತೆ ಐಪಿಎಸ್ ಅಧಿಕಾರಿಗಳ ಸಂಘಕ್ಕೆ ಅವರು ಮನವಿ ಮಾಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಸ್ವಿಗ್ಗಿ ಮೂಲಕ 1 ಕೆ.ಜಿ ಜಿಲೇಬಿ ಕಳುಹಿಸಿದ ಬಿಜೆಪಿ: ಅದೂ ಕ್ಯಾಶ್ ಆನ್ ಡೆಲಿವರಿ!