ಕೋಯಿಕ್ಕೋಡ್(ಕೇರಳ): ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಫಾ ವೈರಸ್ ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಇಂದು ಸಾವನ್ನಪ್ಪಿದ್ದಾನೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಘಟನೆಯನ್ನು ಖಚಿತಪಡಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪಂಡಿಕ್ಕಾಡ್ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ಬಾಲಕನಿಗೆ ನಿಫಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಶನಿವಾರದಿಂದಲೂ ಆತನ ಆರೋಗ್ಯ ಗಂಭೀರವಾಗಿತ್ತು. ರಕ್ತದೊತ್ತಡ ಕಡಿಮೆಯಾಗಿ, ಇಂದು ಬೆಳಗ್ಗೆ 10.50ರ ಸುಮಾರಿಗೆ ಹೃದಯ ಸ್ತಂಭನಕ್ಕೆ ಕಾರಣವಾಗುವ ಆಂತರಿಕ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾನೆ ಎಂದು ಸಚಿವೆ ಮಾಹಿತಿ ನೀಡಿದರು.
ಐಸೋಲೇಶನ್ನಲ್ಲಿ ಕುಟುಂಬಸ್ಥರು: ಆರೋಗ್ಯ ಇಲಾಖೆ ನಿಫಾ ಸೋಂಕಿನ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ. ಪಂಡಿಕ್ಕಾಡ್ ಮತ್ತು ಅನಕ್ಕಯಂ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಪ್ರದೇಶದಲ್ಲಿ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದ 246 ವ್ಯಕ್ತಿಗಳನ್ನು ಗುರುತಿಸಿ, ಅವರ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೇ, ಸೋಂಕಿತನ ಸಂಪರ್ಕದ ನಂತರ ಜ್ವರ ಕಾಣಿಸಿಕೊಂಡ ಕಾರಣ ಮತ್ತೊಂದು ಮಗುವಿನ ದ್ರಾವಣವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಏತನ್ಮಧ್ಯೆ, ಮಗುವಿನ ತಂದೆ, ತಾಯಿ ಮತ್ತು ಚಿಕ್ಕಪ್ಪನನ್ನು ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ.
ಪುಣೆಯಿಂದ ಆ್ಯಂಟಿಬಾಡಿ:ಮತ್ತೊಂದೆಡೆ,ಬಾಲಕನ ಸಾವಿಗೂ ಮುನ್ನ ಮಾತನಾಡಿದ್ದ ಸಚಿವೆ ವೀಣಾ, ಬಾಲಕ ಜುಲೈ 12ರಂದು ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದ. ಜುಲೈ 15ರಂದು ಅದೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ. ನಂತರ ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಬಾಲಕನನ್ನು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಪಂಡಿಕ್ಕಾಡ್ ನಿಫಾ ಸೋಂಕಿನ ಕೇಂದ್ರಬಿಂದುವಾಗಿದೆ. ಈ ಪ್ರದೇಶದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೇ, ಆರೋಗ್ಯ ಇಲಾಖೆ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ 30 ಪ್ರತ್ಯೇಕ ಕೊಠಡಿಗಳು ಮತ್ತು ಆರು ಹಾಸಿಗೆಗಳ ಐಸಿಯು ಘಟಕ ಸ್ಥಾಪಿಸಿದೆ. ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರನ್ನು ಪ್ರತ್ಯೇಕವಾಗಿ ನಿಗಾ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಆಸ್ಟ್ರೇಲಿಯಾದಿಂದ ಮೊನೊಕ್ಲೋನಲ್ ಆ್ಯಂಟಿಬಾಡಿ ಖರೀದಿಸಿ ಪುಣೆ ಎನ್‌ಐವಿಯಲ್ಲಿ ಸಂಗ್ರಹಿಸಲಾಗಿದೆ. ಈ ಆ್ಯಂಟಿಬಾಡಿ ಇಂದು ರಾಜ್ಯಕ್ಕೆ ತಲುಪಲಿದೆ. ಮಲಪ್ಪುರಂನಲ್ಲಿ 24 ಗಂಟೆಗಳ ಕಂಟ್ರೋಲ್ ರೂಂ ತೆರೆಯಲಾಗಿದೆ. ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಶಿಬಿರಗಳ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾರಣಾಂತಿಕ ನಿಫಾ ವೈರಸ್: ಮಾನವರ ಮೇಲೆ ಲಸಿಕೆ ಪ್ರಯೋಗ ಆರಂಭ